Actor Vishal: ಸ್ಯಾಂಡಲ್ವುಡ್ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಆಪ್ತ ಸ್ನೇಹಿತ, ತಮಿಳು ನಟ ವಿಶಾಲ್ ಯಾವುದೋ ದೀರ್ಘ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಶಂಕೆಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ನಟನಿಗೆ ಸಂಬಂಧಿಸಿದ ವಿಡಿಯೋವೊಂದು ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
12 ವರ್ಷಗಳ ಹಿಂದೆ ವಿಶಾಲ್ ಅಭಿನಯದ 'ಮದಗಜರಾಜ' ಚಿತ್ರವು ಈಗ ತೆರೆಗೆ ಬರಲು ಸಿದ್ಧವಾಗಿದೆ. ಇದರ ಹಿನ್ನೆಲೆ ನಿನ್ನೆ ಚೆನ್ನೈನಲ್ಲಿ ಚಿತ್ರತಂಡ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ತನ್ನ ಸಿನಿಮಾದ ಬಗ್ಗೆ ಮಾತನಾಡಲು ಮೈಕ್ ಹಿಡಿದ ವಿಶಾಲ್, ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತೆ ದೃಶ್ಯಗಳಲ್ಲಿ ಕಾಣಿಸಿದೆ. ಮೈಕ್ ಹಿಡಿದು ಮಾತನಾಡುವಾಗ ಕೈ ನಡುಗುತ್ತಿರುವುದು ಮತ್ತು ಮಾತುಗಳು ತೊದಲಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಮತ್ತು ನೆಟ್ಟಿಗರು ವಿಶಾಲ್ಗೆ ಏನಾಯಿತು ಎಂಬ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಕೆಲವರು ನಟನಿಗೆ ಯಾವುದೋ ದೀರ್ಘ ಕಾಲದ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಅವರಿಗೆ ಮಾತನಾಡಲು ಹಾಗೂ ಮೈಕ್ ಹಿಡಿಯದಿರುವಂತ ಪರಿಸ್ಥಿತಿ ಎದುರಾಗಿದೆ ಎಂದು ಅಭಿಪ್ರಾಯಿಸಿದರೆ, ಇನ್ನೂ ಕೆಲವರು ವಿಶಾಲ್ ಅವರ ಕುತ್ತಿಗೆಯಲ್ಲಿ ಯಾವುದೋ ಗುರುತು ಕಾಣಿಸುತ್ತಿದೆ. ಅವರ ಕೈಯಲ್ಲಿ ಮೈಕ್ ಹಿಡಿಯಲು ಆಗ್ತಿಲ್ಲ, ಸ್ಪಷ್ಟವಾಗಿ ಮಾತನಾಡಲು ಆಗ್ತಿಲ್ಲ ಮತ್ತು ದೇಹದ ತೂಕ ಬಹಳ ಇಳಿದುಹೋಗಿದೆ. ಇದೆಲ್ಲವೂ ಯಾವುದೋ ಸಮಸ್ಯೆಯನ್ನು ಒತ್ತಿ ಹೇಳುತ್ತಿದೆ ಎಂದು ತಿಳಿಸಿದ್ದಾರೆ. ಅಸಲಿಗೆ ಚೆನೈನ ಅಪೋಲೋ ಆಸ್ಪತ್ರೆ ವೈದ್ಯರು ವಿಶಾಲ್ಗೆ ಏನಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಹಂಚಿಕೊಂಡಿದ್ದಾರೆ.
ಭಯ ಪಡುವ ಅಥವಾ ಏನೋ ಆಗಿದೆ ಎಂದು ಚಿಂತಿಸುವ ಅಗತ್ಯವಿಲ್ಲ. ವಿಶಾಲ್ಗೆ ವೈರಲ್ ಜ್ವರ ಕಾಡಿದೆ. ಹೀಗಾಗಿ ತೀವ್ರ ಬಳಲುತ್ತಿದ್ದಾರೆ ಅಷ್ಟೇ. ಸದ್ಯದ ಮಟ್ಟಿಗೆ ಸೂಕ್ತ ಚಿಕಿತ್ಸೆ ಪಡೆಯುತ್ತಿರುವ ವಿಶಾಲ್ಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ. ಇದರ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. ಚಿತ್ರದ ಕೆಲಸಗಳಿಂದ ದೂರ ಉಳಿದು, ಬೆಡ್ ರೆಸ್ಟ್ ಪಡೆಯುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ,(ಏಜೆನ್ಸೀಸ್).