

ಮಾಗಡಿ : ರಾಮನಗರ ಜಿಲ್ಲೆಯಲ್ಲಿ ಸ್ಪನ್ ಸಿಲ್ಕ್ ಮಿಲ್ಸ್ ಆರಂಭಿಸಲು ಕೇಂದ್ರ ಟೆಕ್ಸ್‌ಟೈಲ್ಸ್ ಸಚಿವರ ಗಮನಕ್ಕೆ ತರಲಾಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಮೋಟೇಗೌಡನ ಪಾಳ್ಯದಲ್ಲಿ ಸೋಮವಾರ ಹಾಲು ಉತ್ಪಾದಕ ಸಹಕಾರ ಸಂಘದ ಮೊದಲ ಮಹಡಿ ಉದ್ಘಾಟಿಸಿ ಮಾತನಾಡಿ, ರೇಷ್ಮೆಯೂ ಕಾಮಧೇನು ಇದ್ದಂತೆ. ರೇಷ್ಮೆ ಉತ್ಪಾದನೆಯಲ್ಲಿ ರಾಷ್ಟ್ರದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. 1.18 ಲಕ್ಷ ಹೆಕ್ಟೇರ್ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ಕೆಲವೆಡೆ ಸರ್ಕಾರ ಭೂಸ್ವಾಧೀನಪಡಿಸಿಕೊಳ್ಳುತ್ತಿರುವುದರಿಂದ ಈ ಜಾಗ ಕಡಿಮೆಯಾಗುತ್ತಿದೆ. ಹಾಗಾಗಿ ವಿಶೇಷ ಸಿಲ್ಕ್ ಜೋನ್ ಮಾಡುವುದು ಅನಿವಾರ್ಯವಾಗಿದೆ ಎಂದರು.
ಸಿಲ್ಕ್‌ನಿಂದ ಈ ಭಾಗದಲ್ಲಿ ಪ್ರತಿವರ್ಷ 6 ಸಾವಿರ ಮೆಟ್ರಿಕ್ ಟನ್ ವೇಸ್ಟ್ ಬರಲಿದ್ದು, ಇದನ್ನು ಚೀನಾಕ್ಕೆ ರಫ್ತು ಮಾಡಿ ಬೇರೆ ರೀತಿಯ ವಸ್ತುಗಳನ್ನು ತಯಾರಿಸಿ ನಮಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಸಂಬಂಧ ಸ್ಪನ್ ಸಿಲ್ಕ್ ಮಿಲ್ಸ್ ಆರಂಭಿಸಿದರೆ ಅನುಕೂಲವಾಗಲಿದೆ ಎಂದರು.
ವರ್ತುಲ ರಸ್ತೆಗೆ ಅನುಮೋದನೆ: 4750 ಕೋಟಿ ರೂ. ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಿಸಲು ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ದಾಬಸ್‌ಪೇಟೆ, ಮಾಗಡಿ, ರಾಮನಗರ, ಹಾರೋಹಳ್ಳಿ, ಆನೇಕಲ್, ಹೊಸೂರು ಮಾರ್ಗದಲ್ಲಿ ಹಾದುಹೋಗಲಿದೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದ ಸಂಸದರು, ರೈತರಿಗಾಗಿ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ 6700 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ. 3800 ಕೋಟಿ ರೂ. ರಸಗೊಬ್ಬರಕ್ಕೆ ಸಬ್ಸಿಡಿ ನೀಡಲಾಗಿದೆ. 14 ಬೆಳೆಗಳ ಉತ್ಸಾದನೆಗೆ ಸಹಾಯಧನ ನೀಡಲಾಗಿದೆ. ರಾಗಿ ಮಾರಾಟ ಮಾಡುವ ವೇಳೆ ಬಯೋಮೆಟ್ರಿಕ್ ಪಡೆಯದಂತೆ ಸಂಬಂಧಪಟ್ಟವರಿಗೆ ತಿಳಿಸಲಾಗುವುದು ಎಂದು ಹೇಳಿದರು.
ಭೂ ಸ್ವಾಧೀನ ಕೈಬಿಡಿ : ಸರ್ಕಾರ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದು. ಆನೇಕಲ್‌ನಲ್ಲಿ 2 ಸಾವಿರ ಎಕರೆ ಭೂಸ್ವಾಧೀನ ಮಾಡುತ್ತಿರುವುದನ್ನು ಕೈಬಿಡಬೇಕು. ಬೆಂಗಳೂರು, ಅತ್ತಿಬೆಲೆ, ಬಿಡದಿ, ದಾಬಸ್‌ಪೇಟೆ ಸುತ್ತಮುತ್ತ ಕೈಗಾರಿಕಾ ಭೂಮಿ ಇದೆ. ಇಲ್ಲಿ ಕೈಗಾರಿಕೆಗಳನ್ನು ಮಾಡಲಿ ಎಂದ ಸಂಸರು, ಸೋಲೂರು ಹೋಬಳಿ ಮಾಗಡಿಯ ಅವಿಭಾಜ್ಯ ಭಾಗವಾಗಿದ್ದು, ಮಾಗಡಿಗೆ ಉಳಿಸಬೇಕೆಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ನರಸಿಂಹಮೂರ್ತಿ ಬಮುಲ್ ನಿರ್ದೇಶರಾದ ಬಳಿಕ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಡೇರಿಗಳನ್ನು ಆರಂಭಿಸಿದ್ದಾರೆ. ತಾಲೂಕಿಗೆ ನೀರಾವರಿ ಅವಶ್ಯಕತೆ ಇದ್ದು, ಹೇಮಾವತಿ ನೀರಾವರಿ ಯೋಜನೆ ಕಾಮಗಾರಿ ಶೇ.40 ಕೆಲಸಮಾಡಿದರೆ ಎಲ್ಲ ಕೆರೆಗಳು ತುಂಬಲಿವೆ ಎಂದರು.
ಬಿಜೆಪಿ ಮುಖಂಡ ಕೆ.ಆರ್. ಪ್ರಸಾದ್ ಗೌಡ, ತಾಪಂ ಮಾಜಿ ಅಧ್ಯಕ್ಷ ನಾರಾಯಣಪ್ಪ, ಜಿಪಂ ಮಾಜಿ ಸದಸ್ಯ ಕೆ.ಎನ್. ಜಯಶಂಕರ್, ಕಲ್ಯಾ ಗ್ರಾಪಂ ಅಧ್ಯಕ್ಷ ಬಿ.ಕೆ.ಕುಮಾರ್, ತಗ್ಗಿಕುಪ್ಪೆ ಗ್ರಾಪಂ ಮಾಜಿ ಉಪಾಧ್ಯಕ್ಷ ಪಂಚೇರಾಜಣ್ಣ, ತಾಪಂ ಮಾಜಿ ಅಧ್ಯಕ್ಷೆ ಅರುಂಧತಿ ಚಿಕ್ಕಣ್ಣ, ಮುಖಂಡರಾದ ರಂಗಣ್ಣಿ ತಮ್ಮಣ್ಣಗೌಡ, ರಂಗನಾಥ್ ಇತರರು ಇದ್ದರು.
ದರ ಏರಿಕೆಯಿಂದ ಹೊರೆ
ಬಸ್ ದರ ಏರಿಕೆಯಿಂದ ಜನರಿಗೆ ತೊಂದರೆಯಾಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಮಹಿಳೆಯರಿಗೆ ಸಾರಿಗೆ ಉಚಿತ ಮಾಡಿ ಪುರುಷರಿಗೆ ಬಸ್ ದರ ಏರಿಕೆ ಮಾಡಿರುವುದರಿಂದ ತೊಂದರೆಯಾಗಿದೆ. ಉಚಿತವಾಗಿ ನೀಡುವ ಮುನ್ನ ಎಲ್ಲವನ್ನೂ ಯೋಚನೆ ಮಾಡಬೇಕು. ಅವಶ್ಯಕತೆ ಇದ್ದವರಿಗೆ ಉಚಿತ ಯೋಜನೆ ನೀಡಬೇಕು. ಆಗ ಇಂತಹ ಸಮಸ್ಯೆ ಉದ್ಭವವಾಗುವುದಿಲ್ಲ ಎಂದರು. ನೀರಾವರಿ, ಕೃಷಿ, ರೇಷ್ಮೆ, ರಸ್ತೆ, ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಶಾಶ್ವತ ಯೋಜನೆಗಳಿಗೆ ಸರ್ಕಾರ ಮಹತ್ವ ಕೊಡಬೇಕು. ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರಿಲ್ಲ. ಸುಮಾರು ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳು ಇಲ್ಲ. ಕೃಷಿ, ನೀರಾವರಿ, ಅರಣ್ಯ ಇಲಾಖೆಗಳಲ್ಲಿ ಸಿಬ್ಬಂದಿಗಳಿಲ್ಲದೆ ತಾಂಡವಾಡುತ್ತಿದೆ. ಇಂತಹ ಯೋಜನೆಗಳಿಗೆ ಸರ್ಕಾರ ಹೆಚ್ಚು ಅನುದಾನ ಮೀಸಲಿಡಬೇಕು ಎಂದರು.
ಎಚ್‌ಎಂಪಿವಿ ವೈರಸ್ ವಿಚಾರವಾಗಿ ನನಗೆ ಮಾಹಿತಿ ಇಲ್ಲ ಎಂದಷ್ಟೇ ಹೇಳಿದರು.
ಮಾಜಿ ಶಾಸಕ ಎ.ಮಂಜುನಾಥ್, ಮುಖಂಡರಾದ ರಂಗಣ್ಣಿ, ಚಿಕ್ಕಣ್ಣ, ರಂಗನಾಥ್, ಪಂಚೇ ರಾಮಣ್ಣ, ಶ್ರೀಪತಿಹಳ್ಳಿ ರಾಮು ಇತರರು ಇದ್ದರು.