ನ್ಯೂಸ್

ಆಕೆಯ ನಡುವಳಿಕೆ ಹೇಗಿತ್ತು ಅಂದ್ರೆ... ಬಂಧಿತ ವೈದ್ಯೆಯ ಬಗ್ಗೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಸಹೋದ್ಯೋಗಿ! Delhi Blast

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಬೃಹತ್ ಕಾರು ಸ್ಪೋಟ ಪ್ರಕರಣದಲ್ಲಿ ( Delhi Blast ) ಹಲವಾರು ಸ್ಫೋಟಕ ಸಂಗತಿಗಳು ಬೆಳಕಿಗೆ ಬರುತ್ತಲೇ ಇವೆ. ಅಚ್ಚರಿಯ ಸಂಗತಿ ಏನೆಂದರೆ, ಜನರು ದೇವರೆಂದು ಪರಿಗಣಿಸುವ ಹಾಗೂ ಉನ್ನತ ಸ್ಥಾನದಲ್ಲಿರುವ ವೈದ್ಯರೇ ಈ ದಾಳಿಯ ಹಿಂದಿರುವುದು ನಿಜಕ್ಕೂ ಆಘಾತಕಾರಿ. ಒಂದಲ್ಲ, ಎರಡಲ್ಲೂ ನಾಲ್ಕೈದು ವೈದ್ಯರು ಈಗಾಗಲೇ ಬಂಧನವಾಗಿದ್ದಾರೆ. ಅಲ್ಲದೆ, ಶಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಇನ್ನು ಈ ಪ್ರಕರಣದ 3ನೇ ಆರೋಪಿಯಾಗಿರುವ ಡಾ. ಶಾಹೀನ್ ಸಯೀದ್ ಕುರಿತು ಸಹೋದ್ಯೋಗಿ ಪ್ರೊಫೆಸರ್​ಗಳು ಏನು ಹೇಳಿದರು? ಈಕೆ ಯಾರು? ಈಕೆಯ ಹಿನ್ನೆಲೆ ಏನು? ದೆಹಲಿ ಬಾಂಬ್​ ಸ್ಫೋಟದಲ್ಲಿ ಈಕೆಯ ಕೈವಾಡ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಕಂಪ್ಲೀಟ್​ ಉತ್ತರ ಇಲ್ಲಿದೆ.

ಅಂದಹಾಗೆ, ಶಾಹೀನ್ ಸಯೀದ್​ ಎಲ್ಲರಂತೆ ಸಾಧಾರಣವಾಗಿ ವೈದ್ಯರ ಕೆಲಸ ಮಾಡುತ್ತಿದ ಓರ್ವ ಲಖನೌ ಮಹಿಳೆ. ಆದರೆ, ಸಹೋದ್ಯೋಗಿಗಳಿಗೆ ಆಕೆ ಯಾರೆಂಬ ಒಂದು ಸಣ್ಣ ಸುಳಿವು ಕೂಡ ಇರಲಿಲ್ಲ. ಈಕೆ ಭಾರತದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್​-ಎ-ಮೊಹಮ್ಮದ್ (ಜೆಇಎಂ)ನ ಮಹಿಳಾ ವಿಭಾಗವನ್ನು ಸ್ಥಾಪಿಸಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಈಕೆಯನ್ನು ದೆಹಲಿಯ ಅಂತಾರಾಜ್ಯ ಗಡಿಯಲ್ಲಿರುವ ಹರಿಯಾಣದ ಫರಿದಾಬಾದ್‌ನಲ್ಲಿ ಬೃಹತ್ ಸ್ಫೋಟಕಗಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣದ ಬಳಿಕ ಶಾಹೀನ್​ ಸಯೀದ್​ಳನ್ನು ಬಂಧಿಸಿದ ನಂತರವೇ ಆಕೆಯ ಬಗ್ಗೆ ನನಗೆ ಗೊತ್ತಾಯಿತು ಎಂದು ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಆಕೆಯ ಸಹೋದ್ಯೋಗಿ ಇತ್ತೀಚೆಗೆ ಎನ್​ಡಿಟಿವಿ ಜತೆ ಮಾತನಾಡುವಾಗ ತಿಳಿಸಿದರು.

ಸಯೀದ್​​ ಎಂದಿಗೂ ಶಿಸ್ತನ್ನು ಪಾಲಿಸುತ್ತಿರಲಿಲ್ಲ. ಯಾರಿಗೂ ತಿಳಿಸದೆ ಇದ್ದಕ್ಕಿದ್ದಂತೆ ಕೆಲಸದಿಂದ ಹೊರಟುಬಿಡುತ್ತಿದ್ದಳು. ಇದೇ ಸಂದರ್ಭದಲ್ಲಿ ದಿನವಿಡಿ ಹಲವಾರು ಮಂದಿ ಆಕೆಯನ್ನು ಭೇಟಿ ಮಾಡಲು ಬಂದು ಹೋಗುತ್ತಿದ್ದರು. ಆಕೆಯ ನಡುವಳಿಕೆಯನ್ನು ಗಮನಿಸಿದಾಗ ತುಂಬಾ ವಿಚಿತ್ರವಾಗಿತ್ತು. ನಾವು ಹಲವಾರು ಬಾರಿ ಆಕೆಯ ವಿರುದ್ಧ ಆಡಳಿತ ಮಂಡಳಿಗೆ ದೂರು ಸಹ ನೀಡಿದ್ದೆವು ಎಂದು ಹೆಸರೇಳಲು ಇಚ್ಛಿಸಿದ ಪ್ರೊಫೆಸರ್ ವಿವರಿಸಿದರು.

ನಾವು ರಾಷ್ಟ್ರೀಯ ತನಿಖಾ ತಂಡಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಸದ್ಯ ಅನೇಕ ಮಂದಿ ಆಕೆಯ ವೈಯಕ್ತಿಕ ದಾಖಲೆಗಳು ಮತ್ತು ಆಕೆ ಈ ಹಿಂದೆ ಎಲ್ಲಿ ಕೆಲಸ ಮಾಡುತ್ತಿದ್ದಳು ಎಂಬ ಮಾಹಿತಿಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಆರಂಭದಲ್ಲಿ ನಾವು ಒಮ್ಮೆಯ ಆಕೆಯನ್ನು ಅನುಮಾನಿಸಲಿಲ್ಲ. ಆದರೆ, ತುಂಬಾ ದಿನಗಳ ನಂತರ ಆಕೆಯ ನಡವಳಿಕೆಯಲ್ಲಿ ಬದಲಾವಣೆ ಆಗಿದ್ದನ್ನು ನಾವು ಗಮನಿಸಿದ್ದೇವೆ. ಈ ಪ್ರಕರಣದಲ್ಲಿ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ, ಎಲ್ಲಿಯೂ ನಮ್ಮ ಗುರುತನ್ನು ಬಹಿರಂಗಪಡಿಸಬೇಡಿ ಎಂದು ಸಯೀದ್​ ಸಹೋದ್ಯೋಗಿ ಹಾಗೂ ಪ್ರೊಫೆಸರ್​ ಹೇಳಿದರು.

ಅಂದಹಾಗೆ, ಈ ಶಾಹೀನ್​ ಸಯೀದ್​, ಕಾಶ್ಮೀರಿ ಮೂಲದ ವೈದ್ಯ ಮುಜಾಮಿಲ್​ ​ ಶಕೀಲ್ ಜತೆ ಸಂಪರ್ಕದಲ್ಲಿದ್ದಳು. ಶಕೀಲ್​ಗೆ ಸಂಬಂಧಿಸಿದನ ಕಾರು ಕೂಡ ಶಾಹೀನ್​ ಸಹೀದ್​ ಹೆಸರಿನಲ್ಲಿ ನೋಂದಣಿಯಾಗಿದೆ. ಫರೀದಾಬಾದ್‌ನಲ್ಲಿರುವ ಎರಡು ಬಾಡಿಗೆ ಕೊಠಡಿಗಳಿಂದ 2,900 ಕೆಜಿ ಸ್ಫೋಟಕಗಳನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಪೊಲೀಸರು ವಶಪಡಿಸಿಕೊಂಡ ಬಳಿಕ ಶಕೀಲ್​ನನ್ನು ಬಂಧಿಸಲಾಯಿತು. ಬಂಧಿತ ಸಯೀದ್​, ಪಾಕಿಸ್ತಾನದ ಜೆಇಎಂ ಸಂಸ್ಥಾಪಕ ಮಸೂದ್ ಅಜರ್ ಅವರ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಎಂನ ಮಹಿಳಾ ವಿಭಾಗ ಜಮಾತ್ ಉಲ್-ಮೊಮಿನಾತ್‌ನ ಭಾರತದ ಶಾಖೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಳು ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. (ಏಜೆನ್ಸೀಸ್​)