ಯಲಬುರ್ಗಾ(ಕೊಪ್ಪಳ): ಆ ಮಹಿಳೆಯರು ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಮಾರ್ಗ ಮಧ್ಯೆ ಜಲಕಂಟಕ ಕಾದು ಕುಳಿತಿತ್ತು. ಜತೆಯಲ್ಲಿದ್ದ ಸಂಬಂಧಿಕರು ಬೇಡ ನಿಲ್ಲಿ... ಆ ಕಡೆ ಹೋಗಬೇಡಿ ಎಂದು ಜೋರಾಗಿ ಕೂಗಿ ಹೇಳುತ್ತಿದ್ದರೂ ಮಹಿಳೆಯರು ಕೇಳಲಿಲ್ಲ. ದುಸ್ಸಾಹಸಕ್ಕೆ ಕೈ ಹಾಕಿ ನೋಡನೋಡುತ್ತಿದ್ದಂತೆ ಜಲಸಮಾಧಿಯಾದರು!
ಇಂತಹ ಕರುಣಾಜನಕ ಕಥೆ ತಾಲೂಕಿನ ಕರಮುಡಿ ಬಳಿ ಭಾನುವಾರ ಸಂಜೆ ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ಕರಮುಡಿ ಬಳಿಯ ಹಳ್ಳ ತುಂಬಿ ಹರಿಯುತ್ತಿದ್ದು, ಇದನ್ನು ದಾಟಲು ಹೋದ ರತ್ನವ್ವ ಗುರಪ್ಪ ಮಾನಶೆಟ್ಟಿ (48) ಮತ್ತು ಶಾಂತವ್ವ ದೇವಪ್ಪ ಮ್ಯಾಗೇರಿ (44) ಇಬ್ಬರು ಶವವಾಗಿದ್ದಾರೆ. ಇದನ್ನೂ ಓದಿರಿ ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!
ಹೋಲದಲ್ಲಿ ಕೆಲ ಮುಗಿಸಿಕೊಂಡು ಭಾನುವಾರ ಸಂಜೆ ಮನೆಗೆ ಬರುತ್ತಿದ್ದ ಮಹಿಳೆಯರಿಬ್ಬರೂ ಸಂಬಂಧಿಕರ ಕಣ್ಣೆದುರಲ್ಲೇ ಮಳೆ ನೀರಿನಲ್ಲಿ ಕೊಚ್ಚಿಹೋದರು. ಇವರ ಪತ್ತೆಗಾಗಿ ರಾತ್ರಿ ಒಂದು ಗಂಟೆವರೆಗೆ ಅಗ್ನಿಶಾಮಕ ದಳ, ಗ್ರಾಮಸ್ಥರು, ಪೊಲೀಸರು ಶ್ರಮಿಸಿದರೂ ಪ್ರಯೋಜನವಾಗಲಿಲ್ಲ.
ಸೋಮವಾರ ನಸುಕಿನ ಜಾವ ಮತ್ತೆ ಶೋಧಕಾರ್ಯ ಆರಂಭವಾದರೂ 10 ಗಂಟೆಗೆ ಸುಮಾರಿಗೆ ಹಳ್ಳದಿಂದ ಮೂರ್ನಾಲ್ಕು ಕಿಮೀ ದೂರದಲ್ಲಿ ಶವಗಳು ಪತ್ತೆಯಾಗಿವೆ. ಶವಗಳನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಈ ದುರಂತ ಸಾವನ್ನು ಕಂಡ ಗ್ರಾಮಸ್ಥರೂ ದುಃಖತಪ್ತರಾದರು. ಮೃತರ ಕುಟುಂಬಸ್ಥರಿಗೆ ಶಾಸಕ ಹಾಲಪ್ಪ ಆಚಾರ್ ಸಾಂತ್ವನ ಹೇಳಿ, ಎನ್ಡಿಆರ್ಆಫ್ ಮತ್ತು ಎಸ್ಡಿಆರ್ಎಫ್ ಪ್ರಕೃತಿ ವಿಕೋಪದಡಿ ತಲಾ ಐದು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.