ಈ ಮನೆಯಲ್ಲಿ ಮೂವರ ಸಾವಾಯ್ತು... ದೋಷವೆಂದು ಕೆಲ ತಿಂಗಳು ಹೊರಗಿದ್ದ ಮಗ ವಾಪಸ್ ​ಬರುಷ್ಟರಲ್ಲಿ ಕಾದಿತ್ತು ಶಾಕ್​!

home
Published on

ಬೆಂಗಳೂರು: ಈ ಮನೆಯಲ್ಲಿ ಒಂದೂವರೆ ವರ್ಷದೊಳಗೆ ಮೂವರ ಸರಣಿ ಸಾವಾಯ್ತು. ಮನೆಯಲ್ಲಿ ಏನೋ ದೋಷ ಇರಬಹುದೆಂದು ಭಾವಿಸಿದ ಆ ಮನೆಯ ಮಗ ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೆಲತಿಂಗಳ ಬಳಿಕ ಮನೆ ಬಳಿಗೆ ಬಂದಾಗ ಆ ಮನೆಯಲ್ಲಿದ್ದವರನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಉದ್ಯಮಿ ಪ್ರಶಾಂತ್​ ಕುಮಾರ್​(34) ಅವರ ತಾಯಿ ಉಷಾರಾಣಿ ಕೆಲ ವರ್ಷಗಳ ಹಿಂದೆ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ಸ್ವಂತ ಮನೆ ಖರೀದಿಸಿದ್ದರು. ಇದೇ ಮನೆಯಲ್ಲಿ ಪ್ರಶಾಂತ್​ ಕುಟುಂಬ ಸಮೇತ ವಾಸಿಸುತ್ತಿದ್ದರು. 2007ರಲ್ಲಿ ಪ್ರಶಾಂತ್​ ತಾಯಿ ಹಾಗೂ ಹಿರಿಯ ಅಣ್ಣ ಮೃತಪಟ್ಟಿದ್ದರು. 2008ರಲ್ಲಿ ಅಜ್ಜಿ ಕೂಡ ನಿಧನರಾದರು. ಇದರಿಂದ ಆತಂಕಗೊಂಡ ಪ್ರಶಾಂತ್​, ದೋಷದಿಂದ ಈ ಸಾವುಗಳು ಸಂಭವಿಸುತ್ತಿರಬಹುದು ಎಂದು ಭಾವಿಸಿ ಸ್ವಲ್ಪ ಸಮಯದ ಮಟ್ಟಿಗೆ ಬೇರೆ ಮನೆಯಲ್ಲಿ ವಾಸ ಮಾಡಲು ನಿರ್ಧರಿಸಿದರು. ಅದರಂತೆ ಕೆ.ಪಿ. ಅಗ್ರಹಾರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದರು. ಇತ್ತೀಚೆಗೆ ಮತ್ತೆ ಹೊಸೂರಿನಲ್ಲಿರುವ ಮನೆಗೆ ಮರಳಿದಾಗ ಆ ಮನೆಯಲ್ಲಿ ಅಪರಿಚಿತರು ವಾಸಿಸುತ್ತಿದ್ದರು. ಅಷ್ಟೇ ಅಲ್ಲ ಪ್ರಶಾಂತ್​ಗೆ ಗೊತ್ತಿಲ್ಲದೆಯೇ ಆ ಮನೆ ಬೇರೆಯವರಿಗೆ ಮಾರಾಟವಾಗಿತ್ತು. ಈ ಕೃತ್ಯವೆಸಗಿದ್ದು ಯಾರು ಗೊತ್ತಾ? ಇದನ್ನೂ ಓದಿರಿ ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ಪ್ರಶಾಂತ್​ರ ಮನೆಯನ್ನು ಅವರಿಗೇ ತಿಳಿಯದಂತೆ ಮಾರಾಟ ಮಾಡಿದ್ದು ಚಿಕ್ಕಮ್ಮ ಜಾನ್ಸಿ ರಾಣಿ. ಪ್ರಶಾಂತ್​ ಮನೆ ಬದಲಾವಣೆ ಮಾಡುವ ಸಮಯದಲ್ಲಿ ಇವರ ತಾಯಿ ಉಷಾರಾಣಿ ಹೆಸರಿನಲ್ಲಿದ್ದ ಮನೆಯ ದಾಖಲೆಗಳನ್ನು ಜಾನ್ಸಿ ರಾಣಿ ಹಾಗೂ ಇವರ ಪತಿ ಕುಮಾರ್​ ಪಡೆದುಕೊಂಡಿದ್ದರು. ನಂತರ ತಾವೇ ಮನೆಯ ಮಾಲೀಕರೆಂದು ಬಿಂಬಿಸಿ ದಾಖಲೆ ದುರುಪಯೋಗ ಪಡಿಸಿಕೊಂಡು ಸುಬ್ರಹ್ಮಣಿ ಎಂಬುವವರಿಗೆ ಮಾರಾಟ ಮಾಡಿದ್ದರು. ಹಾಗಾಗಿ ಪ್ರಶಾಂತ್​, ಹಲಸೂರು ಗೇಟ್​ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಬಾವಿ ನಿವಾಸಿ ಜಾನ್ಸಿ ರಾಣಿ(46), ಕುಮಾರ್​(52) ಎಂಬುವವರ ವಿರುದ್ಧ ಪೊಲೀಸರು ಎಫ್​​ಐಆರ್​ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net