ದಕ್ಷಿಣ ಕೊರಿಯಾದ ಜಾಗತಿಕ ಕಂಪನಿ ಸ್ಯಾಮ್ಂಗ್ ಇತ್ತೀಚೆಗೆ ಗ್ರೇಟರ್ ನೋಯ್ಡಾದಲ್ಲಿ ಲ್ಯಾಪ್ಟಾಪ್ ಉತ್ಪಾದನಾ ಘಟಕ ಸ್ಥಾಪಿಸುವುದಾಗಿ ಘೊಷಿಸಿದೆ. ದೇಶೀಯ ಉತ್ಪಾದನೆ ಉತ್ತೇಜಿಸಲು ಮತ್ತು ಲ್ಯಾಪ್ಟಾಪ್ ಆಮದು ಕಡಿಮೆ ಮಾಡಲು ಭಾರತ ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ.
ಭಾರತ ಪ್ರಸ್ತುತ ವಾರ್ಷಿಕ 3 ಬಿಲಿಯನ್ ಡಾಲರ್ (ಅಂದಾಜು 25 ಸಾವಿರ ಕೋಟಿ ರೂಪಾಯಿ) ಮೊತ್ತದ ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ ತಯಾರಿಸುವ ಗುರಿ ಹೊಂದಿದೆ. ಆದರೆ, ಕಳೆದ ಏಪ್ರಿಲ್-ಜೂನ್ ತ್ರೖೆಮಾಸಿಕದಲ್ಲಿ 7 ಬಿಲಿಯನ್ ಡಾಲರ್ (ಅಂದಾಜು 58 ಸಾವಿರ ಕೋಟಿ ರೂಪಾಯಿ) ಮೊತ್ತದಷ್ಟು ಈ ವಸ್ತುಗಳ ಆಮದು ಮಾಡಿಕೊಳ್ಳಲಾಗಿದೆ ಎಂಬುದು ಗಮನಾರ್ಹ. ಅಂದರೆ, ಈ ಗುರಿಯು ಒಂದು ತ್ರೖೆಮಾಸಿಕದಲ್ಲಿ ಮಾಡಿಕೊಳ್ಳಲಾಗುವ ಆಮದು ಪ್ರಮಾಣದ ಅರ್ಧಕ್ಕಿಂತಲೂ ಕಡಿಮೆ. ಇದಲ್ಲದೆ, ಭಾರತವು ಶೇಕಡಾ 70-80ರಷ್ಟು ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ.
ಭಾರತ 2026ರ ವೇಳೆಗೆ ವಾರ್ಷಿಕ 300 ಬಿಲಿಯನ್ ಡಾಲರ್ (ಅಂದಾಜು 25 ಲಕ್ಷ ಕೋಟಿ ರೂಪಾಯಿ) ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ ಗುರಿ ಇಟ್ಟುಕೊಂಡಿದೆ. ಈ ಪೈಕಿ ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ ಉತ್ಪಾದನೆ ಗುರಿಯನ್ನು 2026ರ ವೇಳೆಗೆ 25 ಬಿಲಿಯನ್ ಡಾಲರ್ (ಅಂದಾಜು 2 ಲಕ್ಷ ಕೋಟಿ ರೂಪಾಯಿ) ಮೊತ್ತಕ್ಕೆ ನಿಗದಿಪಡಿಸಲಾಗಿದೆ. ಭಾರತದ ದೇಶೀಯ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯು ಮುಂದಿನ ಐದು ವರ್ಷಗಳಲ್ಲಿ 65 ಬಿಲಿಯನ್ ಡಾಲರ್ನಿಂದ (5.4 ಲಕ್ಷ ಕೋಟಿ ರೂಪಾಯಿ) 180 ಬಿಲಿಯನ್ ಡಾಲರ್ಗೆ (15 ಲಕ್ಷ ಕೋಟಿ ರೂಪಾಯಿ) ಬೆಳೆಯುವ ನಿರೀಕ್ಷೆಯಿದೆ. 2026ರ ವೇಳೆಗೆ ಭಾರತದ 2-3 ಅಗ್ರ ರಫ್ತು ಉತ್ಪನ್ನಗಳಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಇರುವಂತೆ ನೋಡಿಕೊಳ್ಳಲು ಉದ್ದೇಶಿ ಸಲಾಗಿದೆ. 2021-22 ರಲ್ಲಿ ಅಂದಾಜು 15 ಬಿಲಿಯನ್ ಡಾಲರ್ನಿಂದ (ಅಂದಾಜು 1.25 ಲಕ್ಷ ಕೋಟಿ ರೂಪಾಯಿ) 2026ರ ವೇಳೆಗೆ 120 ಬಿಲಿಯನ್ ಡಾಲರ್ಗೆ (ಅಂದಾಜು 10 ಲಕ್ಷ ಕೋಟಿ ರೂಪಾಯಿ) ರಫ್ತು ಹೆಚ್ಚಳವಾಗುವ ನಿರೀಕ್ಷೆ ಇದೆ.
ಯಶಸ್ಸಾಗದ ಮೊದಲ ಪಿಎಲ್ಐ: ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ಗಳ ತಯಾರಿಕಾ ವಲಯದಲ್ಲಿ ಉತ್ಪಾದನೆ ಹೆಚ್ಚಿಸಲು ಭಾರತ ವ್ಯಾಪಕ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದೆ. 2021ರಲ್ಲಿ ಪ್ರಾರಂಭಿಸಲಾದ ಪಿಎಲ್ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್- ಉತ್ಪಾದನೆ ಆಧಾರಿತ ಪ್ರೋತ್ಸಾಹಕ) ಯೋಜನೆಯ ಮೊದಲ ಆವೃತ್ತಿಯು ಆಪಲ್, ಎಸರ್, ಎಚ್ಪಿ ಮುಂತಾದ ಪ್ರಮುಖ ಕಂಪನಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿಲ್ಲ.
ಪಿಎಲ್ಐ 2.0 ಯೋಜನೆಯು ಹೆಚ್ಚಿನ ಭರವಸೆಯೊಂದಿಗೆ 2023ರಲ್ಲಿ ಜಾರಿಗೊಂಡಿದೆ. 2021ರಲ್ಲಿ ಈ ಯೋಜನೆಗೆ 7,350 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ, ಈಗ ಪಿಎಲ್ಐ 2.0 ಯೋಜನೆಯಡಿ 17,000 ಕೋಟಿ ರೂಪಾಯಿ ವೆಚ್ಚದೊಂದಿಗೆ ಆರು ವರ್ಷಗಳ ಅವಧಿಗೆ ಉತ್ತಮ ಸಬ್ಸಿಡಿ ಮತ್ತು ಇತರ ಆರ್ಥಿಕ ಪೋ›ತ್ಸಾಹಕಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಹೀಗಿದ್ದರೂ ಸರ್ಕಾರವು ಈ ಉದ್ಯಮಕ್ಕೆ ಗಂಭೀರ ಸಂದೇಶ ರವಾನಿಸುವವರೆಗೂ ಈ ಪ್ರೋತ್ಸಾಹಕ ಯೋಜನೆಗೆ ಪ್ರತಿಕ್ರಿಯೆಯು ನೀರಸವಾಗಿಯೇ ಇತ್ತು.
ಐಟಿ ಹಾರ್ಡ್ವೇರ್ ಉತ್ಪಾದನೆಗಾಗಿ ಪಿಎಲ್ಐ 2.0 ಯೋಜನೆಯಡಿ ಸಹಿ ಮಾಡಲು ಮಾಡಲು ಆಗಸ್ಟ್ 30 ಅಂತಿಮ ಗಡುವು ನೀಡಲಾಗಿತ್ತು. ಇದಾದ ಮರುದಿನ ಆಗಸ್ಟ್ 31ರಿಂದ ಪ್ರತಿ ಉತ್ಪನ್ನದ ಮೇಲೆ ಪರವಾನಗಿ ಅಗತ್ಯವನ್ನು ವಿಧಿಸುವ ಮೂಲಕ ಟ್ಯಾಬ್ಲೆಟ್ ಮತ್ತು ಲ್ಯಾಪ್ಟಾಪ್ ಆಮದು ಮೇಲೆ ನಿರ್ಬಂಧ ಹೇರಲಾಯಿತು. ದೇಶೀಯ ಉತ್ಪಾದನೆ ಉತ್ತೇಜಿಸುವುದು, ಜಾಗತಿಕ ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಲ್ಲಿ ಭಾರತದ ಪಾಲನ್ನು ಹೆಚ್ಚಿಸುವುದು ಮತ್ತು ಚೀನಾದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಸಂಬಂಧಿಸಿದ ಭದ್ರತಾ ಅಪಾಯಗಳ ಬಗ್ಗೆ ದೀರ್ಘಕಾಲದ ಆತಂಕವನ್ನು ಪರಿಹರಿಸುವುದು ಈ ಕ್ರಮದ ಉದ್ದೇಶವೆಂದು ಸರ್ಕಾರ ಹೇಳಿತು. ಆಮದು ನಿರ್ಬಂಧಿಸಲು ಸರ್ಕಾರ ಕೈಗೊಂಡ ಈ ಬಿಗಿ ಹಾಗೂ ಏಕಾಏಕಿ ಕ್ರಮವು ಉದ್ಯಮವನ್ನು ಬೆಚ್ಚಿಬೀಳಿಸಿತು. ಈಗ ಈ ಆಮದು ನಿರ್ಬಂಧದ ಅನುಷ್ಠಾನದ ದಿನಾಂಕವನ್ನು ಆಗಸ್ಟ್ 31ರ ಬದಲಾಗಿ ಅಕ್ಟೋಬರ್ 31ಕ್ಕೆ ವಿಸ್ತರಿಸಲಾಗಿದೆ. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮದ ನಂತರ ಉದ್ಯಮವು ಪಿಎಲ್ಐ 2.0 ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಬಹುತೇಕ ಪ್ರಮುಖ ಉತ್ಪಾದಕರು ಯೋಜನೆಗೆ ಸಹಿ ಹಾಕಿದ್ದಾರೆ. ಆಗಸ್ಟ್ ಅಂತ್ಯದ ವೇಳೆಗೆ ಪ್ರಮುಖ ಜಾಗತಿಕ ಉತ್ಪಾದಕರು ಸೇರಿ 58 ಕಂಪನಿಗಳು ಐಟಿ ಹಾರ್ಡ್ವೇರ್ಗಾಗಿ 17,000 ಕೋಟಿ ರೂಪಾಯಿ ಮೊತ್ತದ ಪಿಎಲ್ಐ ಯೋಜನೆಗಾಗಿ ನೋಂದಾಯಿಸಿಕೊಂಡಿವೆ ಎಂದು ಸರ್ಕಾರ ಹೇಳಿದೆ. ಈ ಯೋಜನೆಯ ಅವಧಿಯಲ್ಲಿ ಅಂದಾಜು 55 ಬಿಲಿಯನ್ ಡಾಲರ್ (ಅಂದಾಜು 4.5 ಲಕ್ಷ ಕೋಟಿ ರೂಪಾಯಿ) ಮೊತ್ತದ ವಸ್ತುಗಳ ಉತ್ಪಾದನೆ ಆಗಬಹುದಾಗಿದೆ.
ಲ್ಯಾಪ್ಟಾಪ್ ತಯಾರಿಕೆಯ ಕ್ಷೇತ್ರದಲ್ಲಿ ತುಲನಾತ್ಮಕವಾಗಿ ಚಿಕ್ಕ ಕಂಪನಿಯಾಗಿರುವ ಸ್ಯಾಮ್ಂಗ್, ಪಿಎಲ್ಐ ಯೋಜನೆಗೆ ಸಹಿ ಮಾಡಿಲ್ಲದಿದ್ದರೂ ನೋಯ್ಡಾದಲ್ಲಿ ಲ್ಯಾಪ್ಟಾಪ್ಗಳ ಉತ್ಪಾದನೆಗಾಗಿ 100-200 ಕೋಟಿ ರೂಪಾಯಿಗಳ ಹೂಡಿಕೆಯನ್ನು ಘೊಷಿಸಿದೆ. ಆದರೆ, ತೈವಾನ್ನ ಆಸುಸ್ ಮತ್ತು ಏಸರ್, ಅಮೆರಿಕದ ಎಚ್ಪಿ ಮತ್ತು ಡೆಲ್, ಚೀನಾದ ಲೆನೊವೊ (ಸ್ಥಳೀಯ ತಯಾರಕರೊಂದಿಗೆ ಜತೆಗೂಡಿ) ರೀತಿಯ ದೊಡ್ಡ ಕಂಪನಿಗಳು ಬೃಹತ್ ಉತ್ಪಾದನೆ ಯೋಜನೆಗಳನ್ನು ಘೊಷಿಸಿವೆ. ಆಸುಸ್ ಕಂಪನಿಯು ಪ್ರಮುಖ ಬಿಡಿಭಾಗಗಳ ಪೂರೈಕೆದಾರರನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ಮುಂದಾಗಿದೆ. ಈ ಕಂಪನಿಯು ಗುತ್ತಿಗೆ ತಯಾರಕ ಫ್ಲೆಕ್ಸ್ ಕಂಪನಿ ಜತೆಗೆ ಚೆನ್ನೈನಲ್ಲಿ ಕಾರ್ಖಾನೆ ಸ್ಥಾಪಿಸಲು ಸಹಕರಿಸುತ್ತಿದೆ. ಭಾರತದಲ್ಲಿ ಲ್ಯಾಪ್ಟಾಪ್ ಮಾರುಕಟ್ಟೆ ಅಗಾಧವಾಗಿ ಬೆಳೆಯುವ ಸಾಮರ್ಥ್ಯ ಹೊಂದಿರುವ ಕಾರಣ ಆಸುಸ್ ತನ್ನ ಉತ್ಪಾದನಾ ಕಾರ್ಯಾಚರಣೆಗಳನ್ನು ಭಾರತದಲ್ಲಿ ವಿಸ್ತರಿಸುವ ಗುರಿ ಹೊಂದಿದೆ.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಭಾರತದಲ್ಲಿ ಕೈಗೆಟಕುವ ದರದಲ್ಲಿ ಕ್ರೋಮ್ುಕ್ಸ್ ತಯಾರಿಸಲು ಎಚ್ಪಿ ಮತ್ತು ಗೂಗಲ್ ಪಾಲುದಾರಿಕೆ ಮಾಡಿಕೊಂಡಿವೆ. ಈ ಸಹಯೋಗವು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ವೆಚ್ಚದ ಲ್ಯಾಪ್ಟಾಪ್ ಆಯ್ಕೆಗಳನ್ನು ಒದಗಿಸುವ ಗುರಿ ಹೊಂದಿದೆ. ಫಾಕ್ಸ್ಕಾನ್ ಮತ್ತು ದೇಶೀಯ ಕಂಪನಿಗಳಾದ ಡಿಕ್ಸನ್ ಟೆಕ್ನಾಲಜೀಸ್, ವಿವಿಡಿಎನ್ ಟೆಕ್ನಾಲಜೀಸ್ ಮತ್ತು ನೆಟ್ವೆಬ್ ಟೆಕ್ನಾಲಜೀಸ್ ಕೂಡ ಪಿಎಲ್ಐ ಯೋಜನೆಗೆ ಸಹಿ ಹಾಕಿವೆ. ಏಕೆಂದರೆ, ಸ್ಥಳೀಯ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಘಟಕಗಳ ತಯಾರಕರನ್ನು ಕೂಡ ಈ ಯೋಜನೆ ಒಳಗೊಂಡಿದೆ.
ಪಿಎಲ್ಐ 2.0 ಅದರ ಪೂರ್ವವರ್ತಿಯನ್ನು ಮೀರಿಸಿ ಯಶಸ್ಸಿನತ್ತ ದಾಪುಗಾಲು ಹಾಕಲು ಸಜ್ಜಾಗಿದೆ. ಪಿಎಲ್ಐ 1.0 ಯೋಜನೆಯನ್ನು 2021 ರಲ್ಲಿ ಪರಿಚಯಿಸಲಾಗಿತ್ತು. ಆದರೆ, ಇದು ಅನೇಕ ಜಾಗತಿಕ ಉತ್ಪಾದಕರನ್ನು ಆಕರ್ಷಿಸಲು ವಿಫಲವಾಯಿತು. ಈ ವರ್ಷದ ಮೇ ತಿಂಗಳಲ್ಲಿ ಸರ್ಕಾರವು ಐಟಿ ಹಾರ್ಡ್ವೇರ್ ಪಿಎಲ್ಐ 2.0 ಯೋಜನೆಗೆ ಬಜೆಟ್ ಅನ್ನು ಗಮನಾರ್ಹವಾಗಿ ಹೆಚ್ಚಿಸಿತು, 2021 ರಲ್ಲಿ ಒದಗಿಸಲಾಗಿದ್ದ 7,350 ಕೋಟಿ ರೂ.ಗಳಿಂದ 17,000 ಕೋಟಿ ರೂಪಾಯಿಗೆ ಬಜೆಟನ್ನು ಈ ಬಾರಿ ಹೆಚ್ಚಿಸಲಾಗಿದೆ. ಪಿಎಲ್ಐ ಮೊದಲ ಆವೃತ್ತಿಯಲ್ಲಿ ಡೆಲ್ ಮತ್ತು ಭಗವತಿ ಉತ್ಪನ್ನಗಳು ಮಾತ್ರ ಮೊದಲ ವರ್ಷದಲ್ಲಿ ತಮ್ಮ ಗುರಿಗಳನ್ನು ಪೂರೈಸಿದವು. ಪಿಎಲ್ಐ 2.0 ಯೋಜನೆಯಡಿಯಲ್ಲಿ, ಕಂಪನಿಗಳಿಗೆ ಆರು ವರ್ಷಗಳ ಅವಧಿಯಲ್ಲಿ ತಮ್ಮ ನಿವ್ವಳ ಹೆಚ್ಚಳದ ಮಾರಾಟದ ಅಂದಾಜು 5ರಷ್ಟು ಸರಾಸರಿ ಪೋ›ತ್ಸಾಹವನ್ನು ನೀಡಲಾಗುತ್ತದೆ. ಮೊದಲ ಆವೃತ್ತಿಯಲ್ಲಿ ನಾಲ್ಕು ವರ್ಷಗಳಲ್ಲಿ ಶೇಕಡಾ 2ರಷ್ಟು ನೆರವನ್ನು ನೀಡಲಾಗಿತ್ತು. ಇದಲ್ಲದೆ, ಮೆಮೊರಿ ಮಾಡ್ಯೂಲ್, ಘನ-ಸ್ಥಿತಿಯ ಡ್ರೖೆವ್ಗಳು ಮತ್ತು ಡಿಸ್ಪ್ಲೇ ಪ್ಯಾನೆಲ್ಗಳಂತಹ ನಿರ್ದಿಷ್ಟ ಘಟಕಗಳನ್ನು ಸ್ಥಳೀಯವಾಗಿ ತಯಾರಿಸುವ ಕಂಪನಿಗಳು ಪರಿಷ್ಕೃತ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಪೋ›ತ್ಸಾಹವನ್ನು ಪಡೆಯುತ್ತವೆ. ಉತ್ಪಾದನಾ ಗುರಿಗಳಿಗಿಂತ ಕಡಿಮೆ ಸಾಧಿಸುವ ಕಂಪನಿಗಳಿಗೆ ಸಬ್ಸಿಡಿಯಲ್ಲಿ ಶೇಕಡಾ 10ರವರೆಗೆ ಕಡಿತ ಮಾಡುವ ಮೂಲಕ ದಂಡವನ್ನು ವಿಧಿಸುವುದು ಕೂಡ ಈ ಯೋಜನೆಯಲ್ಲಿ ಸೇರಿದೆ.
75 ಸಾವಿರ ನೇರ ಉದ್ಯೋಗ: ಐಟಿ ಹಾರ್ಡ್ವೇರ್ ಪಿಎಲ್ಐ ಯೋಜನೆಯಡಿ ಲ್ಯಾಪ್ಟಾಪ್ ಮತ್ತು ಪರ್ಸನಲ್ ಕಂಪ್ಯೂಟರ್ಗಳ ಉತ್ಪಾದನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದಾಗಿ ಸೃಷ್ಟಿಯಾಗುವ ನಿರೀಕ್ಷಿತ ನೇರ ಉದ್ಯೋಗಗಳ ಸಂಖ್ಯೆ ಅಂದಾಜು 75,000 ಆಗಲಿದೆ ಎಂದು ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.