ಚಿಕ್ಕಬಳ್ಳಾಪುರ: ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಅಕಾಲಿಕವಾಗಿ ಸಾವಪ್ಪಿದ ಹಿನ್ನೆಲೆಯಲ್ಲಿ ಜಿಮ್ ಮಾಡಬೇಕಾ ಮಾಡಬಾರದಾ ಎಂಬ ಪ್ರಶ್ನೆ ಉದ್ಭವವಾಗಿದೆ. ಹೆಸರಾಂತ ಹೃದಯ ತಜ್ಞರ ವರದಿಯ ಆಧಾರದ ಮೇಲೆ ಜಿಮ್ಗಳು ಹಾಗೂ ಫಿಟ್ನೆಸ್ ಸೆಂಟರ್ಗಳಿಗೆ ಮಾರ್ಗಸೂಚಿಗಳ ರಚನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ನನಗೆ ಬಹಳ ಆತ್ಮೀಯರು. ಅವರ ಕುಟುಂಬಸ್ಥರು ನಮ್ಮ ಮನೆಗೆ ಬಂದು ಜೊತೆಯಲ್ಲಿ ಊಟ ಮಾಡಿದ್ದೀವಿ. ಅವರ ನೆನಪು ಮರೆಯಾಗಲ್ಲ. ಇದು ದುರದೃಷ್ಟಕರ ವಿಧಿ ಬರಹ ಎಂದು ಸಂತಾಪ ಸೂಚಿಸಿದರು.
"16 ವರ್ಷಗಳ ಹಿಂದೆ ನಾನು, ಅವರು(ಪುನೀತ್) ಒಂದೇ ಸಲ ಜಿಮ್ ಸ್ಟಾರ್ಟ್ ಮಾಡಿದ್ವಿ. ನಾನು, ಅವರು, ರಾಘವೇಂದ್ರ ರಾಜ್‍ಕುಮಾರ್ ಜಿಮ್ ಮಾಡ್ತಿದ್ವಿ. ಪುನೀತ್ ದೇಹದಂಡನೆ ನೋಡಲು ಬಹಳ ಸಂತೋಷ ಆಗ್ತಿತ್ತು. ಆರೋಗ್ಯಕ್ಕೆ ಹೆಚ್ಚು ಲಕ್ಷ್ಯ ಕೊಡ್ತಿದ್ರು. ಯಾವುದೇ ದುರ್ಗುಣಗಳಿರಲಿಲ್ಲ. ಆದ್ರೂ ಕೂಡ ವಿಧಿ ಬರಹ... ದೇವ್ರು ಒಳ್ಳೆಯವರನ್ನ ಇಷ್ಟಪಡ್ತಾರೆ ಅನ್ನೋದಕ್ಕೆ ಇದು ಪೂರಕ ಪ್ರಕರಣ. ಬಹಳ ಬೇಗ ತಂದೆ-ತಾಯಿ, ದೇವರ ಬಳಿ ಹೋಗಿದ್ದಾರೆ ಅಂತ ತಿಳಕೊಂಡಿದ್ದೀನಿ. ರಾಜ್ಯ 2 ದಿನದಿಂದ ಶೋಕಾಚರಣೆಯಲ್ಲಿ ಮುಳುಗಿದೆ. ನನಗೆ ಬಹಳ ನೋವಾಗಿದೆ. ಭಗವಂತ ಅವರ ಕುಟುಂಬಕ್ಕೆ ಆಸರೆಯಾಗಿ ಶಕ್ತಿ ತುಂಬಲಿ. ಮೂವರು ಹೆಣ್ಣುಮಕ್ಕಳಿಗೆ ಎಲ್ಲಾ ಧೈರ್ಯ ಕೊಟ್ಟು ಒಳ್ಳೇದು ಮಾಡಲಿ" ಎಂದರು.
ಜೀವನದಲ್ಲಿ ದೈಹಿಕ ಚಟುವಟಿಕೆಗಳಿಂದ ಲವಲವಿಕೆಯಿಂದ ಇರಬೇಕು. ಬಹಳ ಜನ ಜಿಮ್ ಮಾಡಬೇಕಾ ಬೇಡ್ವಾ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಒಂದೆರೆಡು ಪ್ರಕರಣಗಳಿಂದ ಜಿಮ್ ಮಾಡೋದೇ ತಪ್ಪು ಎಂಬ ನಿರ್ಧಾರ ಸರಿ ಅಲ್ಲ. ಸಂಪೂರ್ಣ ಮಾಹಿತಿಯ ಹೆಸರಾಂತ ಹೃದಯ ತಜ್ಞರ ವರದಿ ತಯಾರು ಮಾಡಲಾಗುವುದು. ಅದರ ಆಧಾರದ ಮೇಲೆ ಜಿಮ್ಸ್ ಹಾಗೂ ಫಿಟ್ನೆಸ್ ಸೆಂಟರುಗಳಿಗೆ ಮಾರ್ಗಸೂಚಿಗಳ ರಚನೆ ಮಾಡಲಾಗುವುದು. ಜಿಮ್ ಮತ್ತು ಫಿಟ್ನೆಸ್ ಸೆಂಟರ್ಗಳಲ್ಲಿ ಯಾವ ಸಾಮಗ್ರಿಗಳಿರಬೇಕು? ಸಮಸ್ಯೆ ಬಂದಾಗ ಯಾವ ರೀತಿ ನಿಭಾಯಿಸಬೇಕು? ಪ್ರಥಮ ಚಿಕಿತ್ಸೆಯಿಂದ ಹಿಡಿದು ಆಸ್ಪತ್ರೆ ದಾಖಲಾಗುವವರೆಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಮ್ ಟೈನರ್ಗೆ ಪರಿಣಿತಿ ಕೊಡುವ ತರಬೇತಿ ನೀಡಲಾಗುವುದು ಎಂದು ಸಚಿವ ಸುಧಾಕರ್ ಹೇಳಿದರು.