ನವದೆಹಲಿ: ಸಿಬಿಎಸ್ಇ ಪಿಯು ರಿಸಲ್ಟ್ ಘೋಷಣೆಯಾದ ದಿನದ ಬೆನ್ನಲ್ಲೇ ಬೋರ್ಡ್ ಎಕ್ಸಾಮ್ ಫಲಿತಾಂಶಕ್ಕಿಂತ ನಮ್ಮ ಜೀವನವೇ ಮುಖ್ಯವೆಂದು ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್, ತಮ್ಮ ಪಿಯು ಮಾರ್ಕ್ಸ್ ಕಾರ್ಡ್ ಶೇರ್ ಮಾಡಿಕೊಂಡು ವಿದ್ಯಾರ್ಥಿ ಹಾಗೂ ಪಾಲಕರಿಗೆ ಸ್ಪೂರ್ತಿದಾಯಕ ಸಂದೇಶವೊಂದನ್ನು ರವಾನಿಸಿದ್ದಾರೆ.
ತಮ್ಮ ಶೈಕ್ಷಣಿಕ ಅವಧಿಯಲ್ಲಿ ಕೆಮಿಸ್ಟ್ರಿಯಲ್ಲಿ 70ಕ್ಕೆ ಕೇವಲ 24 ಅಂಕ ಪಡೆದಿರುವ ಸಂಗ್ವಾನ್ ಪಾಸ್ ಆಗಲು ಬೇಕಾಗಿದ್ದ ಕನಿಷ್ಠ ಅಂಕಕ್ಕಿಂತ ಕೇವಲ ಒಂದು ಅಂಕ ಮಾತ್ರ ಹೆಚ್ಚಿಗೆ ಪಡೆದಿದ್ದಾರೆ.
ತಮ್ಮ ಮಾರ್ಕ್ಸ್ ಕಾರ್ಡ್ ಶೇರ್ ಮಾಡಿಕೊಂಡಿರುವ ಸಂಗ್ವಾನ್ ಮಾಧ್ಯಮದೊಂದಿಗೆ ಮಾತನಾಡಿ, ಕಡಿಮೆ ಅಂಕ ಬಂದಿದ್ದಕ್ಕೆ ನನ್ನ ಸ್ನೇಹಿತರು ಹಾಗೂ ಕುಟುಂಬದವರು ಬೇಸರ ಮಾಡಿಕೊಂಡಿದ್ದನ್ನು ನೋಡಿ, ಅವರಿಗಿಂತ ನನ್ನ ಸ್ಥಿತಿಯೇ ಕೆಟ್ಟದ್ದು ಎಂದು ಭಾಸವಾಯಿತು. ಜಾಲತಾಣದಲ್ಲಿ ನನ್ನ ಅಂಕಪಟ್ಟಿ ಶೇರ್ ಮಾಡಿಕೊಂಡಿದ್ದರ ಉದ್ದೇಶವೇನೆಂದರೆ ನಾನು ನನ್ನ ಜೀವನದಲ್ಲಿ ಇದಕ್ಕಿಂತ ಹೆಚ್ಚು ಮಾಡಲು ಇಂದು ಸಾಧ್ಯವಾಗಿದ್ದರೆ, ಅವರು ಕೂಡ ಹಾಗೇ ಮಾಡಬಹುದು ಎಂದು ತಿಳಿಸುವುದಕ್ಕಾಗಿ ಎಂದರು.
ಇದೀಗ ಸಂಗ್ವಾನ್ ಟ್ವೀಟ್ ವೈರಲ್ ಆಗಿದ್ದು, ಸಾವಿರಾರು ರೀಟ್ವೀಟ್ಗಳನ್ನು ಪಡೆದುಕೊಂಡಿದೆ. ಅಲ್ಲದೆ, ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಕ್ಕೆ ಅನೇಕರು ಸಂಗ್ವಾನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪಿಯು ಪರೀಕ್ಷೆಯಲ್ಲಿ ನಾನು ಕೆಮೆಸ್ಟ್ರಿಯಲ್ಲಿ 24 ಅಂಕ ಗಳಿಸಿದೆ. ಪಾಸ್ ಮಾರ್ಕ್ಸ್ಗಿಂತ ಕೇವಲ ಒಂದು ಅಂಕ ಮಾತ್ರ ಹೆಚ್ಚು ಗಳಿಸಿದೆ. ಆದರೆ, ನಾನು ನನ್ನ ಜೀವನದಲ್ಲಿ ಏನಾಗಬೇಕು ಎಂಬುದನ್ನು ಇದು ನಿರ್ಧರಿಸಲಿಲ್ಲ. ಮಾರ್ಕ್ಸ್ ಎಂಬ ಭಾರದಿಂದ ಮಕ್ಕಳ ಮನಸ್ಸು ಕುಂದುವಂತೆ ಮಾಡಬೇಡಿ ಎಂದು ಮಾರ್ಕ್ಸ್ ಕಾರ್ಡ್ ಶೇರ್ ಮಾಡಿಕೊಂಡು ಸಂಗ್ವಾನ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಿಮ್ಮ ಜೀವನದ ಒಂದು ಮೈಲುಗಲ್ಲಷ್ಟೇ, ಆದರೆ ನೀವು ಏನಾಗಬೇಕು ಎಂಬುದನ್ನು ಅವು ನಿರ್ಧರಿಸಲಾರವು. ಇದೇ ಸಂದೇಶವನ್ನು ನಾನು ನನ್ನ ಟ್ವೀಟ್ ಮೂಲಕ ತಿಳಿಸಿದ್ದೇನೆಂದು ಸಂಗ್ವಾನ್ ಹೇಳಿದರು. ಇದೇ ವೇಳೆ ಬಿಲ್ಗೇಟ್ಸ್, ಸ್ಟೀವ್ ಜಾಬ್ಸ್ ಅವರ ಹೆಸರನ್ನು ಉಲ್ಲೇಖಿಸಿ ಯಶಸ್ಸು ಎಂಬುದು ನಿಮ್ಮ ಪದವಿ ಅಂಕಪಟ್ಟಿಯ ಮೇಲೆ ನಿರ್ಧಾರವಾಗಿರುವುದಿಲ್ಲ ಎಂದರು.
ಅಂದಹಾಗೆ ಸಂಗ್ವಾನ್ ಅವರು ಐಐಟಿ ಮದ್ರಾಸ್ಸಿನ ಹಳೆಯ ವಿದ್ಯಾರ್ಥಿ. 2015ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. (ಏಜೆನ್ಸೀಸ್)