ಸಾಂದರ್ಭಿಕ ಚಿತ್ರ 
ನ್ಯೂಸ್

ಒಬ್ಬನಿಗೆ ಅಪ್ಪ-ಅಮ್ಮನ ಬಗ್ಗೆ ಪ್ರೀತಿ, ಇನ್ನೊಬ್ಬನಿಗೆ ದ್ವೇಷ; ಇಬ್ಬರೂ ಸೇರಿ ಮಾಡಿದ್ರು ಬ್ಯಾಂಕ್ ಲೂಟಿ!

ನವದೆಹಲಿ: ಅಪ್ಪ-ಅಮ್ಮನನ್ನು ಮೆಚ್ಚಿಸುವ ಸಲುವಾಗಿ ಯುವಕನೊಬ್ಬ ಬ್ಯಾಂಕ್ ಲೂಟಿ ಮಾಡಿದ್ದು, ಆತನಿಗೆ ಅಪ್ಪ-ಅಮ್ಮನ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂಬ ಉದ್ದೇಶವಿದ್ದ ಇನ್ನೊಬ್ಬ ಕೈಜೋಡಿಸಿದ್ದಾನೆ. ಕೊನೆಗೆ ಇವರಿಬ್ಬರೂ ತಾವಂದುಕೊಂಡಿದ್ದನ್ನು ಮಾಡುವುದರಲ್ಲಿ ಯಶಸ್ವಿಯಾಗಿದ್ದರೂ, ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಹದಿನೆಂಟು ವರ್ಷದ ಅಜಯ್ ಬಜಾರೆ ಹಾಗೂ ಪ್ರದೀಪ್ ಠಾಕೂರ್ ಎಂಬಿಬ್ಬರು ಜೊತೆಯಾಗಿ ಈ ಲೂಟಿಯಲ್ಲಿ ಪಾಲ್ಗೊಂಡಿದ್ದಾರೆ. ಮಹಾರಾಷ್ಟ್ರದ ಇಂದಿರಾಗಾಂಧಿ ನಗರದ ಬರಾನಲ್ ಸ್ಕ್ವೇರ್​ನಲ್ಲಿರುವ ಕೋ-ಆಪರೇಟಿವ್ ಬ್ಯಾಂಕೊಂದರಲ್ಲಿ ಇವರಿಬ್ಬರೂ ಸೇರಿ 4.78 ಲಕ್ಷ ರೂಪಾಯಿ ಲೂಟಿ ಮಾಡಿದ್ದಾರೆ.

ತನಗೆ ಭಾರಿ ಸಂಪಾದನೆ ಇದೆ ಎಂದು ಅಪ್ಪ-ಅಮ್ಮನನ್ನು ಮೆಚ್ಚಿಸುವ ಸಲುವಾಗಿ ಅಜಯ್​, ಪ್ರದೀಪ್ ಜತೆ ಸೇರಿ ಈ ಕೃತ್ಯ ಎಸಗಿದ್ದಾನೆ. ಮಾತ್ರವಲ್ಲ ಲೂಟಿಯ ಹಣದಲ್ಲಿ ಅಮ್ಮನಿಗೆ 50 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕೊಡಿಸಿದ್ದರೆ, ಅಪ್ಪನಿಗೆ 40 ಸಾವಿರ ರೂ. ಕೊಟ್ಟು ಒಂದು ಸೆಕೆಂಡ್ ಹ್ಯಾಂಡ್ ಕಾರ್ ಕೊಡಿಸಿದ್ದಾನೆ.

ಇನ್ನು ಇವನಿಗೆ ಸಹಕರಿಸಿರುವ ಪ್ರದೀಪ್ ಕಥೆಯೇ ಬೇರೆ. ಈತ ಚಿಕ್ಕಂದಿನಲ್ಲೇ ಅಪ್ಪ-ಅಮ್ಮನಿಂದ ಪರಿತ್ಯಕ್ತನಾಗಿದ್ದು, ಅವರ ಮೇಲಿನ ಸೇಡಿಗೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಹಣ ಕದ್ದ ಬಳಿಕ ಇಬ್ಬರೂ ಎರಡು ಹೊಸ ಮೊಬೈಲ್ ಫೋನ್ ಖರೀದಿಸಿ ರಾಜಸ್ಥಾನಕ್ಕೆ ಪರಾರಿಯಾಗಲು ಯತ್ನಿಸಿದ್ದರು. ಆದರೆ ತನಿಖೆಗಿಳಿದಿದ್ದ ಪೊಲೀಸರು ಇವರ ಜಾಡು ಹಿಡಿದು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ಬರೀ 2 ಲಕ್ಷ ರೂ. ಮೌಲ್ಯದ ನಗ-ನಗದನ್ನು ಪೊಲೀಸರು ವಶಪಡಿಸಿಕೊಳ್ಳಲು ಸಾಧ್ಯವಾಗಿದ್ದು, ಉಳಿದುದನ್ನು ಅವರು ಖರ್ಚು ಮಾಡಿದ್ದರು. (ಏಜೆನ್ಸೀಸ್)