ನ್ಯೂಸ್

ಕರೊನಾದಿಂದ ಪಾರಾಗಲು 'ಮದ್ದು' ಕೊಟ್ಟಿದ್ದಾರೆ ಎಚ್​ಡಿಕೆ, ಸಮಸ್ಯೆಗೆ ಇದೊಂದೇ ಪರಿಹಾರ!

arunakunigal

ಬೆಂಗಳೂರು: ಕರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಿರುವ ಮೂರ್ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್​ಗಳಿಲ್ಲ, ವೆಂಟಿಲೇಟರ್ ಕೊರತೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಈ ಸಮಸ್ಯೆಗೆ ಸ್ವಯಂ ಪ್ರೇರಿತ ಲಾಕ್​ಡೌನ್ ಒಂದೇ ಪರಿಹಾರ ಎಂದಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ನಿವಾಸಿಗಳಿಗೆ ಕೋವಿಡ್​19 ನಿಂದ ಪಾರಾಗಲು ಉಳಿದಿರುವುದು ಒಂದೇ ಒಂದು ದಾರಿ ಎಂದರೆ, ಮನೆಯಲ್ಲೇ ಉಳಿದು ಸ್ವಯಂ ಘೋಷಿತ ಬಂದ್ ಆಚರಿಸಿ. ಪ್ರಾಣಕ್ಕಿಂತ ಹಣ ಮುಖ್ಯವಲ್ಲ.‌ ಜೀವ ಇದ್ದರೆ ಹೇಗಾದರೂ ಬದುಕಬಹುದು. ನಿಮ್ಮ ಜೀವ-ಜೀವನ ನಿಮ್ಮ ಕೈಯಲ್ಲೇ ಇದೆ. ರಾಜ್ಯ ಸರ್ಕಾರ ಕೂಡ ಪರೋಕ್ಷವಾಗಿ ಇದನ್ನೇ ಹೇಳುತ್ತಿದೆ. ಕರೊನಾ ವೈರಸ್ ಸಮೂಹ ಪ್ರಸರಣದ ಈಗಿನ ಸ್ಥಿತಿಯಲ್ಲಿ ಮನೆಯಲ್ಲಿರುವುದೇ 'ಮನೆ ಮದ್ದು' ಎಂದು ಅವರು ಹೇಳಿದ್ದಾರೆ.

ಈ ಸೋಂಕಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರ ನಿಗದಿಪಡಿಸಿರುವುದು ದಿನಕ್ಕೆ 10-15 ಸಾವಿರ ರೂಪಾಯಿ. ಈ ದರ ಬಡವರಿಗಿರಲಿ, ಮೇಲ್ಮಧ್ಯಮ ವರ್ಗದವರಿಗೂ ಭರಿಸಲು ಸಾಧ್ಯವಾಗದು ಎಂದು ಎಚ್​ಡಿಕೆ ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ಕುಟುಂಬದ ನಾಲ್ಕು ಜನರಿಗೆ ಕರೊನಾ ಬಂದರೆ ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿರುವ ದರದ ಪ್ರಕಾರ 5-6 ಲಕ್ಷ ರೂ. ಬೇಕು. ಬಡವರು ಮಧ್ಯಮ ವರ್ಗದವರು ಎಲ್ಲಿಂದ ತರುತ್ತಾರೆ? ಸರ್ಕಾರ ಕೈಚೆಲ್ಲಿ ಕುಳಿತಿರುವಾಗ ನಮ್ಮ ಜೀವ ನಾವೇ ಉಳಿಸಿಕೊಳ್ಳಬೇಕು. ದಯಮಾಡಿ ಜಾಗ್ರತೆಯಿಂದ ಇರಿ. ಇದು ರಾಜ್ಯದ ಜನತೆಗೆ ನನ್ನ ಕಳಕಳಿಯ ಮನವಿ ಎಂದು ಕುಮಾರಸ್ವಾಮಿ ಕೋರಿದ್ದಾರೆ.