ನ್ಯೂಸ್

ಜಗತ್ತಿನ 6ನೇ ಅತಿಶ್ರೀಮಂತನಾಗಿದ್ದ ಅನಿಲ್ ಅಂಬಾನಿ ಬಳಿ ಈಗ ಇರೋದು ಒಂದು ಕಾರು ಮಾತ್ರ!

ಲಂಡನ್​: ಜಗತ್ತಿನ ಅತಿಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದ ಅನಿಲ್ ಅಂಬಾನಿ ಅವರ ಬಳಿ ಈಗ ಇರುವುದು ಒಂದೇ ಒಂದು ಕಾರು ಮಾತ್ರ! ಚೀನೀ ಕಂಪನಿಗಳು ಹೂಡಿರುವ ವ್ಯಾಜ್ಯದಂತೆ ಸಾಲ ಮರುಪಾವತಿಸಲು ಅಥವಾ ಕಾನೂನು ಹೋರಾಟದ ವೆಚ್ಚ ಭರಿಸುವುದಕ್ಕೆ ತನ್ನ ಬಳಿ ಈಗ ಬೆಲೆ ಬಾಳುವಂಥದ್ದೇನೂ ಉಳಿದಿಲ್ಲ ಎಂದು ಅನಿಲ್ ಅಂಬಾನಿ ಲಂಡನ್ ಕೋರ್ಟ್​ಗೆ ತಿಳಿಸಿರುವುದಾಗಿ ವರದಿಯಾಗಿದೆ.

ಅನಿಲ್ ಧೀರೂಭಾಯ್ ಅಂಬಾನಿ ಗ್ರೂಪ್​ನ ಚೇರ್​ಮನ್ ಅನಿಲ್ ಅಂಬಾನಿ ಈಗ ಪಾಪರ್ ಆಗಿರುವುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಮೂರು ಚೀನೀ ಬ್ಯಾಂಕುಗಳು - ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಚೀನಾ ಡೆವಲಪ್​ಮೆಂಟ್ ಬ್ಯಾಂಕ್, ಎಕ್ಸಿಮ್ ಬ್ಯಾಂಕ್ ಆಫ್ ಚೀನಾಗಳು- ಅನಿಲ್ ಅಂಬಾನಿ ವಿರುದ್ಧ ವ್ಯಾಜ್ಯ ಹೂಡಿವೆ. 680 ಶತಕೋಟಿ ಡಾಲರ್ ಸಾಲ ಮರುಪಾವತಿಸಿಲ್ಲ, ಅಲ್ಲದೆ, ಮರುಸಾಲ ರೂಪದಲ್ಲಿ ಪಡೆದ 925 ದಶಲಕ್ಷ ಡಾಲರನ್ನೂ ಹಿಂದಿರುಗಿಸದೇ ವಂಚನೆ ಎಸಗಿದ್ದಾರೆ ಎಂಬ ಆರೋಪ ಹೊರಿಸಿವೆ.

ಈ ಸಂಬಂಧ ಮಾಧ್ಯಮಗಳಲ್ಲಿ ಅನೇಕ ಸ್ಟೋರಿಗಳು ಬಂದಿರುವುದನ್ನು ಗಮನಿಸಿ, ಅನಿಲ್ ಅಂಬಾನಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಅದರಲ್ಲಿ ಹೇಳಿರುವುದಿಷ್ಟು- ನನ್ನ ಬಳಿ ರಾಲ್ಸ್ ರಾಯ್ಸ್ ಅಥವಾ ಯಾವುದೇ ಐಷಾರಾಮಿ ಕಾರು ಇಲ್ಲ. ಇರುವುದು ಒಂದೇ ಒಂದು ಕಾರು. ವ್ಯಾಜ್ಯದ ವೆಚ್ಚವನ್ನು ಸರಿದೂಗಿಸಲು ಚಿನ್ನಾಭರಣ ಮಾರಾಟ ಮಾಡಿದೆ. ಅದರಿಂದ 9.9 ಕೋಟಿ ರೂಪಾಯಿ ಬಂದಿದೆ. ಈ ಆಭರಣವನ್ನೆಲ್ಲ ಈ ವರ್ಷ ಜನವರಿಯಿಂದ ಜೂನ್ ನಡುವೆ ಮಾರಾಟ ಮಾಡಿದ್ದೇನೆ. ಸದ್ಯ ನನ್ನ ಜೀವನಶೈಲಿಯೂ ಸರಳವಾಗಿದೆ. ಕನಿಷ್ಠ ವೆಚ್ಚದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಅದನ್ನು ನನ್ನ ಪತ್ನಿ ಮತ್ತು ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಖರ್ಚು ವೆಚ್ಚಗಳು ಎದುರಾದರೆ, ಇತರೆ ಆಸ್ತಿಗಳ ಮಾರಾಟಕ್ಕೆ ಕೋರ್ಟ್​ನ ಅನುಮತಿ ಬೇಕಾಗುತ್ತದೆ. (ಏಜೆನ್ಸೀಸ್)