ಹಾಸನ: ದೇವರಿಗೆ ಪೂಜೆ ಸಲ್ಲಿಸುವ ಮುನ್ನ ಸ್ನಾನ ಮಾಡಲು ನದಿಗೆ ಇಳಿದಿದ್ದ ಸರ್ಕಾರಿ ವೈದ್ಯರೊಬ್ಬರು ನೀರುಪಾಲಾಗಿರುವ ದುರ್ಘಟನೆ ಗೊರೂರಿನಲ್ಲಿರುವ ಹೇಮಾವತಿ ನದಿಯ ಹಿನ್ನೀರಿನ ಖೋನಾಪುರದಲ್ಲಿ ನಡೆದಿದೆ.
ಚಂದ್ರಶೇಖರ್ (31) ಮೃತಪಟ್ಟ ಯುವ ವೈದ್ಯ. ಹೊಳೆನರಸೀಪುರ ತಾಲೂಕಿನ, ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಕರ್ತವ್ಯಕ್ಕೂ ಮುನ್ನ ಹೇಮಾವತಿ ನದಿ ಹಿನ್ನೀರಿನ ಖೋನಾಪುರ ಐಲ್ಯಾಂಡ್‌ನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರು.
ಹಲವು ವರ್ಷಗಳಿಂದ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಇದೀಗ ನದಿ ನೀರು ಸಂಪೂರ್ಣ ಕಡಿಮೆಯಾಗಿದ್ದರಿಂದ ಸ್ನಾನಕ್ಕೆಂದು ನದಿಗೆ ಇಳಿದ ವೇಳೆ ಆಳ ಅರಿಯದೆ ನೀರಿನಲ್ಲಿ ಮುಳುಗಿ ಚಂದ್ರಶೇಖರ್ ಅವರು ಮೃತಪಟ್ಟಿದ್ದಾರೆ.
ಕಾರಿನಲ್ಲಿ ಮೊಬೈಲ್ ಇಟ್ಟು, ನದಿಯ ದಡದಲ್ಲಿ ಬಟ್ಟೆ ಬಿಚ್ಚಿಟ್ಟು ಚಂದ್ರಶೇಖರ್ ಸ್ನಾನಕ್ಕೆ ಇಳಿದಿದ್ದರು. ರಾತ್ರಿಯವರೆಗೂ ಮಗ ಮನೆಗೆ ಬಾರದೆ ಇದ್ದಾಗ ಪಾಲಕರು ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸದಿದ್ದಾಗ ಆತಂಕಗೊಂಡ ಪಾಲಕರು ತಕ್ಷಣ ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿದರು.
ಅರಕಲಗೂಡು ಪೊಲೀಸರ ಸೂಚನೆ ಮೇರೆಗೆ ಗೊರೂರು ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಒಂದೇ ಸ್ಥಳದಲ್ಲಿ ಕಾರು ನಿಂತಿದ್ದನ್ನು ಗಮನಿಸಿದ್ದಾರೆ. ಇದೇ ಸಂದರ್ಭದಲ್ಲಿ ನದಿಯ ದಡದಲ್ಲಿ ಚಂದ್ರಶೇಖರ್ ಬಟ್ಟೆ ಪತ್ತೆಯಾಗಿದ್ದು, ಅದರ ಅಣತಿ ದೂರದಲ್ಲೇ ಚಂದ್ರಶೇಖರ್ ಶವ ತೇಲುತ್ತಿರುವುದು ಪತ್ತೆಯಾಯಿತು.
ಸದ್ಯ ಶವವನ್ನು ಹೊರಗೆ ತೆಗೆಯಲಾಗಿದೆ. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.