ಚಂಡೀಗಢ: ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ)ದ ಅಧ್ಯಕ್ಷ ನಫೆ ಸಿಂಗ್ ರಾಥೀ ಅವರು ಗುಂಡೇಟಿಗೆ ಬಲಿಯಾಗಿರುವುದಾಗಿ ವರದಿಯಾಗಿದೆ. ಇಂದು (ಫೆ.25) ಬಹದ್ದೂರ್ಗಢದಲ್ಲಿ ಈ ಘಟನೆ ನಡೆದಿದೆ. ಪಕ್ಷದ ಕಾರ್ಯಕರ್ತ ಜೈಕಿಶನ್ ಎಂಬುವರು ಕೂಡ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಎನ್‌ಎಲ್‌ಡಿ ನಾಯಕ ಅಭಯ್ ಚೌತಾಲಾ ಅವರು ಪಕ್ಷದ ಕಾರ್ಯಕರ್ತನ ಸಾವನ್ನು ಖಚಿತಪಡಿಸಿದ್ದಾರೆ. ಹ್ಯೂಂಡೈ ಐ10 ಕಾರಿನಲ್ಲಿ ಬಂದು ಶೂಟರ್ಗಳು ನಫೆ ಸಿಂಗ್ ರಾಥೀ ಅವರ ಕಾರಿನ ಮೇಲೆ ಹಲವು ಸುತ್ತುಗಳು ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆದರು. ಈ ದಾಳಿಯಲ್ಲಿ ಭದ್ರತಾ ಸಿಬ್ಬಂದಿಗೂ ಗಂಭೀರ ಗಾಯಗಳಾಗಿವೆ.
ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಮತ್ತು ಎಸ್‌ಟಿಎಫ್ ತಂಡಗಳು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಜಜ್ಜರ್ ಎಸ್‌ಪಿ ಅರ್ಪಿತ್ ಜೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಬ್ರಹ್ಮಶಕ್ತಿ ಸಂಜೀವನಿ ಆಸ್ಪತ್ರೆಗೆ ದಾಖಲಿಸಲಾಯಿತು. ನಫೆ ಸಿಂಗ್ ರಾಥೀ ಸೇರಿದಂತೆ ಒಟ್ಟು ನಾಲ್ವರನ್ನು ದಾಖಲಿಸಲಾಗಿತ್ತು. ಆದರೆ, ರಾಥೀ ಸೇರಿ ಇಬ್ಬರು ಸಾಕಷ್ಟು ರಕ್ತವನ್ನು ಕಳೆದುಕೊಂಡ ಬಳಿಕ ಮೃತಪಟ್ಟರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ರಾಥೀಗೆ ಅನೇಕ ಬಾರಿ ಗುಂಡು ಹಾರಿಸಲಾಗಿದೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಇತರೆ ಇಬ್ಬರನ್ನು ಐಸಿಯುಗೆ ದಾಖಲಿಸಲಾಗಿದ್ದು, ಅವರ ಭುಜ, ಎದೆ ಮತ್ತು ತೊಡೆಗಳಲ್ಲಿ ಗುಂಡಿನ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಐಎನ್‌ಎಲ್‌ಡಿ ನಾಯಕ ಅಭಯ್ ಚೌತಾಲಾ ಮಾತನಾಡಿ, ರಾಥೀಗೆ ಜೀವ ಬೆದರಿಕೆಯಿದ್ದರೂ ರಾಜ್ಯ ಸರ್ಕಾರ ಭದ್ರತೆಯನ್ನು ಒದಗಿಸಲು ವಿಫಲವಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಗೃಹ ಸಚಿವ ಅನಿಲ್ ವಿಜ್ ರಾಜೀನಾಮೆ ನೀಡಬೇಕು ಎಂದು ಚೌತಾಲಾ ಒತ್ತಾಯಿಸಿದ್ದಾರೆ. (ಏಜೆನ್ಸೀಸ್)