ನವದೆಹಲಿ: ಇಸ್ರೇಲ್ನಲ್ಲಿ ರಣಭೀಕರ ಯುದ್ಧದ ಪರಿಸ್ಥಿತಿಗೆ ಕಾರಣವಾಗಿರುವ ಹಮಾಸ್ ಉಗ್ರರ ಗುಂಪಿನ ಮಾಸ್ಟರ್ ಮೈಂಡ್ ಎನ್ನಲಾದ ವ್ಯಕ್ತಿಯೊಬ್ಬನ ಕುರಿತು ವಿಷಯ ಬಹಿರಂಗಗೊಂಡಿದೆ. ಆತ ಯಾರು, ಮೂಲತಃ ಎಲ್ಲಿಯವ ಎಂಬುದು ಕೂಡ ಬಯಲಾಗಿದೆ.
ಮುಹಮ್ಮದ್ ಖಾಸೀಂ ಸವಾಲ್ಹ ಎಂಬಾತನೇ ಹಮಾಸ್ ಉಗ್ರರ ಗುಂಪಿನ ಮಾಸ್ಟರ್ ಮೈಂಡ್ ಎಂಬುದಾಗಿ ಮಾಧ್ಯಮವೊಂದು ಬಯಲು ಮಾಡಿದೆ. ಬ್ರಿಟನ್ ಪ್ರಜೆಯೇ ಆಗಿರುವ ಆತ ಲಂಡನ್ನ ಫ್ಲ್ಯಾಟ್ವೊಂದರಲ್ಲಿ ನೆಲೆಸಿದ್ದಾನೆ ಎಂದೂ ವಿಶೇಷ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ಯಾಲೆಸ್ತೀನಿಯಾ ನಿಯಂತ್ರಣದಲ್ಲಿದ್ದ ಗಾಜಾದಲ್ಲಿ ನೆಲೆಸಿದ್ದ ಸವಾಲ್ಹ ಎಂಬ 62 ವರ್ಷದ ವ್ಯಕ್ತಿಯೇ ಆ ಮಾಸ್ಟರ್ ಮೈಂಡ್ ಆಗಿದ್ದು, 1990ರ ಸಮಯದಲ್ಲಿ ಬ್ರಿಟನ್ಗೆ ಪರಾರಿಯಾಗಿದ್ದ. ಇದಕ್ಕಾಗಿ ಆತ ಸಂಬಂಧಿಯೊಬ್ಬರ ಪಾಸ್ಪೋರ್ಟ್ ದುರ್ಬಳಕೆ ಮಾಡಿಕೊಂಡಿದ್ದು, ಬಳಿಕ ಅಲ್ಲೇ 2000ನೇ ಇಸವಿಯಲ್ಲಿ ಪಾಸ್ಪೋರ್ಟ್ ಪಡೆದ ಎಂದೂ ಹೇಳಲಾಗಿದೆ.
ಆತ ಇಸ್ರೇಲ್ನ ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಎಂದು 2004ರಲ್ಲಿ ಯುಎಸ್ ಜಸ್ಟಿಸ್ ಡಿಪಾರ್ಟ್ಮೆಂಟ್ ಸೂಚಿಸಿತ್ತು. ಅಲ್ಲದೆ ಇದು ಆತ ಲಂಡನ್ಗೆ ಹೋದ ಮೇಲೂ ಹಮಾಸ್ ಜತೆ ಸಂಪರ್ಕದಲ್ಲಿದ್ದು ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ್ದಕ್ಕೆ ಸಾಕ್ಷಿಯಾಗಿತ್ತು.
ಅಲ್ಲದೆ ಸವಾಲ್ಹ ಹಮಾಸ್ನ ರಾಜಕೀಯ ಹಾಗೂ ಸೇನಾ ತಂತ್ರಗಾರ ಎಂದು 2006ರಲ್ಲಿ ಬಿಬಿಸಿಯಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಲಾಗಿತ್ತು. 2013 ಹಾಗೂ 2017ರಲ್ಲಿ ಆತ ಹಮಾಸ್ ಪಾಲಿಟ್ಬ್ಯೂರೋ ಸದಸ್ಯ ಕೂಡ ಆಗಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸವಾಲ್ಹ ಹಮಾಸ್ ಚಟುವಟಿಕೆಯಲ್ಲಿ ಮುಂದುವರಿದಿರುವುದು ಖಚಿತ ಎಂದು 2017ರಲ್ಲೇ ಬ್ರಿಟಿಷ್ ಪತ್ರಿಕೆ ಬರೆದಿತ್ತು ಎಂಬುದಾಗಿ ಈ ವರದಿಯಲ್ಲಿ ತಿಳಿಸಲಾಗಿದೆ. ಸವಾಲ್ಹ 2021ರಲ್ಲಿ 3,20,700 ಪೌಂಡ್ಸ್ನಲ್ಲಿ ಖರೀದಿಸಿರುವ ಆಸ್ತಿಯಲ್ಲಿ ಪತ್ನಿ ಸವ್ಸಾನ್ ಜತೆ ನೆಲೆಸಿದ್ದಾನೆ. ಸವಾಲ್ಹ ಬ್ರಿಟನ್ನ ಕಾನೂನುಬದ್ಧ ಪ್ರಜೆಯಾಗಿದ್ದು, ಆತನ ವಿರುದ್ಧ ಸರಣಿ ಆರೋಪಗಳನ್ನು ಮಾಡಲಾಗಿದೆ ಎಂದು ಆತನ ವಕೀಲರು ತಿಳಿಸಿದ್ದಾಗಿ ಈ ವಿಶೇಷ ವರದಿಯಲ್ಲಿ ಹೇಳಲಾಗಿದೆ.