ನ್ಯೂಸ್

ಮನೆಗಳ ಕದ ತಟ್ಟಿದ ಇಸ್ರೇಲ್ ಸೇನೆ; ಕ್ಷಿಪಣಿಗಳಿಂದ ಕಟ್ಟಡಗಳ ಧ್ವಂಸ

ನವದೆಹಲಿ: ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಗುರುವಾರ ಭೀಕರಗೊಂಡಿದ್ದು ಖಾನ್ ಯೂನಿಸ್ ನಗರದಲ್ಲಿ ಇಸ್ರೇಲಿ ಪಡೆಗಳು ಕ್ಷಿಪಣಿಗಳಿಂದ ಕಟ್ಟಡಗಳನ್ನು ಧ್ವಂಸಗೊಳಿಸುತ್ತಿರುವ ಭಯಾನಕ ದೃಶ್ಯಗಳ ವಿಡಿಯೋಗಳನ್ನು ಇಸ್ರೇಲಿ ಸೇನೆ ಬಿಡುಗಡೆಗೊಳಿಸಿದೆ. ಭೂ ಸೇನೆಯ ಯೋಧರು ಮನೆ ಮನೆಗಳಿಗೂ ತೆರಳಿ ಹಮಾಸ್ ಕಾರ್ಯಕರ್ತರು ಇದ್ದಾರೆಯೇ, ಸುರಂಗಗಳು ಇವೆಯೇ ಎಂದು ಪರಿಶೀಲಿಸಿದರು. ಗುರುವಾರ ಖಾನ್ ಯೂನಿಸ್ ಮೇಲೆ ನಡೆಸಿದ ದಾಳಿಗಳಲ್ಲಿ ಹಮಾಸ್​ನ ಅನೇಕ ಹೋರಾಟಗಾರರು ಹತರಾದ ರೆಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ತಿಳಿಸಿದೆ. ಇಸ್ರೇಲ್​ನ ನೌಕಾ ಪಡೆಗಳು ಕೆಲವು ಆವರಣಗಳ ಮೇಲೆ ನಿಖರವಾಗಿ ದಾಳಿ ನಡೆಸಿದವು. ಅವುಗಳು ಹಮಾಸ್ ಮಿಲಿಟರಿ ನೆಲೆಗಳು ಎನ್ನುವುದು ಇಸ್ರೇಲ್ ಆರೋಪವಾಗಿದೆ.

ಇಡೀ ಕುಟುಂಬ ನಾಶ: ಗಾಜಾ ನಗರದ ನೆರೆಯ ಅಲ್-ದರಾಜ್​ನ ಮನೆಯೊಂದರ ಮೇಲೆ ಅಲ್-ಅಸಾಲಿ ಕುಟುಂಬದ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ನಡೆಸಿದ ಬಾಂಬ್ ದಾಳಿಯಲ್ಲಿ 30 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಉತ್ತರ ಗಾಜಾದ ಬೇಟ್ ಲಹಿಯಾ ಎಂಬಲ್ಲಿ ಆಶ್ರಯ ಪಡೆದಿದ್ದ ಶಾಲೆಯೊಂದರ ಮೇಲಿನ ಇಸ್ರೇಲ್ ದಾಳಿಯಲ್ಲಿ ಒಂದು ಕುಟುಂಬದ ಅನೇಕ ಸದಸ್ಯರು ಮೃತಪಟ್ಟಿದ್ದಾರೆ.

  • ಮಾನವೀಯ ದುರಂತಕ್ಕೆ ಕಾರಣವಾಗುತ್ತಿರುವ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ವಿಶ್ವ ಸಂಸ್ಥೆ ಹೇಳಿದೆ.
  • ಅಧ್ಯಕ್ಷ ಜೋ ಬಿಡೆನ್​ರ ಇಸ್ರೇಲ್-ಪರ ಧೋರಣೆಗೆ ಡೆಮಾಕ್ರಟಿಕ್ ಪಕ್ಷದ ಸದಸ್ಯರ ಬೆಂಬಲ ಹೆಚ್ಚುತ್ತಿದೆ.
  • ವಿಶ್ವ ಸಂಸ್ಥೆ ಮಹಾ ಕಾರ್ಯದರ್ಶಿ ಅಂತೋನಿಯೋ ಗುಟೆರಸ್ ಆಡಳಿತ ಅವಧಿ ‘ವಿಶ್ವ ಶಾಂತಿಗೆ ಅಪಾಯಕಾರಿ’ ಎಂದು ಇಸ್ರೇಲ್ ಹೇಳಿದೆ.