ನ್ಯೂಸ್

ಚಟ್ನಿಯಲ್ಲಿ ಕೂದಲು ಪತ್ತೆ! ಹೋಟೆಲ್​ ಮ್ಯಾನೇಜರ್​ಗೆ ಕಾದಿತ್ತು ಶಾಕ್, ಇದು ಸೋಶಿಯಲ್​ ಮೀಡಿಯಾ ಪವರ್​​

ಹೈದರಾಬಾದ್​: ಇತ್ತೀಚಿಗೆ ಹೋಟೆಲ್​ಗೆ ಸಂಬಂಧಿಸಿದಂತೆ ಬೆಳಕಿಗೆ ಬರುತ್ತಿರುವ ಕೆಲ ಘಟನೆಗಳನ್ನು ನೋಡಿದರೆ ಹೊರಗಡೆ ಊಟ ಮಾಡಲು ಕೂಡ ಭಯವಾಗುತ್ತಿದೆ. ಕೆಲವರಂತೂ ಹೋಟೆಲ್​ ಊಟಕ್ಕೆ ಹೆದರುತ್ತಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದಾಗ ಹಲವು ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ಸುದ್ದಿಯನ್ನು ಓದಿದ್ದೇವೆ. ಅಲ್ಲದೆ, ಕೆಲವೊಮ್ಮೆ ಗ್ರಾಹಕರು ಊಟ ಮಾಡುವಾಗ ವಿಚಿತ್ರ ಅನುಭವಗಳನ್ನು ಎದುರಿಸುತ್ತಾರೆ. ತಿಂದ ಅನ್ನದಲ್ಲಿ ಮೊಳೆ, ಹುಳುಗಳು ಕಾಣಿಸಿಕೊಳ್ಳುವುದನ್ನು ಕಂಡಿದ್ದೇವೆ. ಅದೇ ರೀತಿ ಹೋಟೆಲ್​ ಒಂದರ ತಿಂಡಿಯಲ್ಲಿ ಕೂದಲು ಪತ್ತೆಯಾಗಿದ್ದು, ಅಂಗಡಿ ಮಾಲೀಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅಸಲಿ ಕಥೆ ಏನೆಂಬುದನ್ನು ನಾವೀಗ ತಿಳಿಯೋಣ.

ಉಮೇಶ್ ಕುಮಾರ್ ಎಂಬ ವ್ಯಕ್ತಿ ಹೈದರಾಬಾದ್​ನ ಎಎಸ್ ರಾವ್ ನಗರದಲ್ಲಿರುವ ಪ್ರಸಿದ್ಧ ಹೋಟೆಲ್‌ಗೆ ಜೂನ್ 11ರಂದು ತಮ್ಮ ಕುಟುಂಬದೊಂದಿಗೆ ಹೋಗಿದ್ದರು. ಈ ವೇಳೆ ತಮಗೆ ಬೇಕಾದ ತಿಂಡಿಗಳನ್ನು ಆರ್ಡರ್ ಮಾಡಿದರು. ಒಟ್ಟು 522 ರೂಪಾಯಿ ಬಿಲ್ ಮಾಡಲಾಗಿದೆ. ಬಿಲ್​ ಅನ್ನು ಪಕ್ಕಕ್ಕೆ ಇಡೋಣ. ಅಸಲಿ ಸಂಗತಿ ಏನೆಂದರೆ, ಟಿಫಿನ್ ಮಾಡುವಾಗ ಉಮೇಶ್​ ಕುಟುಂಬಕ್ಕೆ ಶಾಕ್​ ಆಗಿದೆ. ಏಕೆಂದರೆ, ಅವರು ತಿನ್ನುತ್ತಿದ್ದ ಟಿಫಿನ್‌ನಲ್ಲಿನ ಚಟ್ನಿಯಲ್ಲಿ ಕೂದಲು ಪತ್ತೆಯಾಗಿತ್ತು. ಕೂಡಲೇ ರೆಸ್ಟೊರೆಂಟ್​ನ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಉಮೇಶ್​ ಅವರ ಬಳಿ ಕ್ಷಮೆ ಕೇಳಿ ಬೇರೆ ತಿಂಡಿಯನ್ನು ನೀಡಿದರು.

ಆದರೂ ಉಮೇಶ್ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಇಸಿಐಎಲ್ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಟಿಫಿನ್ ಮಾಡುತ್ತಿದ್ದಾಗ ಚಟ್ನಿಯಲ್ಲಿ ಕೂದಲು ಕಂಡುಬಂದಿದೆ. ಈ ವಿಚಾರವನ್ನು ಮ್ಯಾನೇಜರ್ ಬಳಿ ಹೇಳಿದಾಗ ಪ್ಲೇಟ್ ಬದಲಾಯಿಸಲಾಗಿದೆ. ಅದೇನೇ ಇರಲಿ, ಅದೊಂದು ಕಹಿ ಅನುಭವ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದರು. ಉಮೇಶ್ ಹಾಕಿರುವ ಈ ಟ್ವೀಟ್ ವೈರಲ್ ಆಗಿದ್ದು, ಅಧಿಕಾರಗಳ ಗಮನಕ್ಕೆ ಬಂದ ಬೆನ್ನಲ್ಲೇ ರೆಸ್ಟೋರೆಂಟ್​ಗೆ ಶಾಕ್ ಕೊಟ್ಟಿದ್ದಾರೆ. ಎಚ್‌ಎಂಸಿ ಕಾಯ್ದೆಯ ಸೆಕ್ಷನ್ 674 ರ ಪ್ರಕಾರ, ರೆಸ್ಟೋರೆಂಟ್‌ಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ.

ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. ಆಹಾರದಲ್ಲಿ ಹುಳುಗಳು, ಬಿರಿಯಾನಿಯಲ್ಲಿ ಜಿರಳೆ ಕಾಣಿಸಿಕೊಂಡ ಘಟನೆಗಳೂ ನಡೆದಿವೆ. ಇನ್ನು ಕೆಲವೆಡೆ ಊಟದಲ್ಲಿ ಮೊಳೆ, ಕಲ್ಲುಗಳೂ ಕಂಡು ಬಂದಿವೆ. ಇವು ಸಾಕಾಗುವುದಿಲ್ಲವೆಂಬಂತೆ ಕೊಳೆತ ಚಿಕನ್, ಮಟನ್ ಬಡಿಸಿದ ಘಟನೆಗಳೂ ನಡೆದಿವೆ. ಇದಲ್ಲದೆ, ಇಂತಹ ಘಟನೆಗಳ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳು ಸಹ ಆಗಾಗ ಪ್ರತಿಕ್ರಿಯಿಸುತ್ತಿರುತ್ತಾರೆ. ಗುಣಮಟ್ಟದ ಆಹಾರಗಳನ್ನು ನೀಡದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರಿ ದಂಡ ವಿಧಿಸಿ ಹೋಟೆಲ್ ಮ್ಯಾನೇಜರ್​ಗಳಿಗೆ ಶಾಕ್ ನೀಡುತ್ತಿದ್ದಾರೆ. (ಏಜೆನ್ಸೀಸ್​)