ನ್ಯೂಸ್

ಪ್ರಧಾನಿ ಮೋದಿಗೆ ಗಯಾನಾದ ಅತ್ಯುನ್ನತ ಗೌರವ; ಬಾರ್ಬಡೋಸ್​ನಿಂದಲೂ ಪ್ರತಿಷ್ಠಿತ ಅವಾರ್ಡ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡೊಮಿನಿಕಾ ದೇಶದ ಅತ್ಯುನ್ನತ ಗೌರವ ಡೊಮಿನಿಕಾ ಅವಾರ್ಡ್ ಆಫ್ ಆನರ್ ಘೊಷಣೆಯಾದ ಬೆನ್ನಲ್ಲೇ ಗಯಾನಾ ತನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ‘ದಿ ಆರ್ಡರ್ ಆಫ್ ಎಕ್ಸಲೆನ್ಸ್’ನ್ನು ನೀಡುವುದಾಗಿ ಘೊಷಿಸಿದೆ. ಜತೆಗೆ ಬಾರ್ಬಡೋಸ್ ಕೂಡ ಪ್ರತಿಷ್ಠಿತ ಆರ್ಡರ್ ಆಫ್ ಫ್ರೀಡಮ್ ಆಫ್ ಬಾರ್ಬಡೋಸ್ ಗೌರವವನ್ನು ಪ್ರದಾನ ಮಾಡುವುದಾಗಿ ತಿಳಿಸಿದೆ.

ಈ ಗೌರವಗಳೊಂದಿಗೆ ಪ್ರಧಾನಿ ಮೋದಿ ಅವರಿಗೆ ನೀಡಲಾದ ಅಂತಾರಾಷ್ಟ್ರೀಯ ಗೌರವಗಳ ಸಂಖ್ಯೆ 19ಕ್ಕೆ ಏರಿದಂತಾಗಿದೆ. ಪ್ರಧಾನಿ ಮೋದಿಯವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ನೈಜೀರಿಯಾದ ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವ ದಿ ಗ್ರಾ್ಯಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ರ್ ಗೌರವವನ್ನು ಆ ದೇಶದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರಿಂದ ಸ್ವೀಕರಿಸಿದರು. ಗೌರವ ಸ್ವೀಕರಿಸಿದ ವೇಳೆ ನೈಜೀರಿಯಾ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ, ಈ ಗೌರವವು ಭಾರತ-ನೈಜೀರಿಯಾ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸ್ಪೂರ್ತಿ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಭ್ರಮದ ಸ್ವಾಗತ: ಗಯಾನಾದ ಬಾರ್ಬಡೋಸ್​ನಲ್ಲಿ ಮೋದಿ ಅವರನ್ನು ಅನಿವಾಸಿ ಭಾರತೀಯರು ಸಂಭ್ರಮದಿಂದ ಸ್ವಾಗತಿಸಿದರು. 180 ವರ್ಷಗಳ ಹಿಂದೆ ವಲಸೆ ಬಂದು, ಗಯಾನಾದ ವಿವಿಧ ಕ್ಷೇತ್ರಗಳಲ್ಲಿ ಭಾರತೀಯರು ಗುರುತಿಸಿಕೊಂಡಿರುವುದು ಬಲು ಸಂತಸದ ವಿಷಯ ಎಂದು ಪ್ರಧಾನಿ ಖುಷಿ ಹಂಚಿಕೊಂಡರು. ಗಯಾನಾಕ್ಕೆ 50 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದಾರೆ. ಮಂಗಳವಾರ ಬ್ರೆಜಿಲ್​ನಿಂದ ನಿರ್ಗಮಿಸಿದ ನಂತರ ಬುಧವಾರ ಬೆಳಗ್ಗೆ ಗಯಾನಾಕ್ಕೆ ಬಂದಿಳಿದ ಪಿಎಂ, ಹೋಟೆಲ್​ನಲ್ಲಿ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು.

2 ಶತಮಾನಗಳ ಹಿಂದೆ ವಲಸೆ: ಗಯಾನಾದಲ್ಲಿ ಸುಮಾರು 3,20,000 ಭಾರತೀಯ ಮೂಲದವರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. 185 ವರ್ಷಗಳ ಹಿಂದೆ ವಲಸೆ ಬಂದ ಅತ್ಯಂತ ಹಳೆಯ ಅನಿವಾಸಿ ಭಾರತೀಯರಲ್ಲಿ ಇವರೂ ಒಂದು ಎಂದು ತಿಳಿಸಲಾಗಿದೆ. ಭಾರತೀಯ ಮೂಲದ ಜನರನ್ನು ಹೊರತುಪಡಿಸಿ, ಸುಮಾರು 2,000 ಭಾರತೀಯ ಪ್ರಜೆಗಳು ಇಲ್ಲಿದ್ದಾರೆ. ಅವರು ಇಂಡಿಯನ್ ಮಿಷನ್, ಇಂಡಿಯನ್ ಮಿಷನ್​ನ ಭಾರತೀಯ ಸಾಂಸ್ಕೃತಿಕ ಕೇಂದ್ರ, ಬ್ಯಾಂಕ್ ಆಫ್ ಬರೋಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ್ತೆ ಕೆಲವರು ಅಂತಾರಾಷ್ಟ್ರೀಯ ಏಜೆನ್ಸಿಗಳಲ್ಲಿದ್ದರೆ, ವೈದ್ಯರು, ದಾದಿಯರು, ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿದ್ಯಾರ್ಥಿಗಳೂ ಇದ್ದಾರೆ.

ರಾಮಾಯಣ ಪ್ರಸ್ತುತಿಗೆ ಶ್ಲಾಘನೆ: ಮಂಗಳವಾರದಂದು ಬ್ರೆಜಿಲ್​ನಲ್ಲಿ ರಾಮಾಯಣದ ಪ್ರಸ್ತುತಿ ವೀಕ್ಷಿಸಿದ ಮೋದಿ, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ. ರಾಮಾಯಣ ಪ್ರಸ್ತುತಪಡಿಸಿದ ಜೋನಸ್ ಮಾಸೆಟ್ಟಿ ಮತ್ತು ತಂಡವನ್ನು ಭೇಟಿಯಾದ ಪಿಎಂ, ವೇದಾಂತ ಮತ್ತು ಗೀತೆಯ ಕುರಿತ ತಂಡದ ಉತ್ಸಾಹದ ಬಗ್ಗೆ ನಾನು ಹಿಂದಿನ ಮನ್ ಕಿ ಬಾತ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದೆ ಎಂದು ನೆನಪಿಸಿಕೊಂಡರು. ಜೋನಸ್ ಅವರ ತಂಡ ಸಂಸ್ಕೃತದಲ್ಲಿ ರಾಮಾಯಣವನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಿತು. ಭಾರತೀಯ ಸಂಸ್ಕೃತಿ ಪ್ರಪಂಚದಾದ್ಯಂತ ಪ್ರಭಾವ ಬೀರುತ್ತಿರುವುದು ಶ್ಲಾಘನೀಯ ಎಂದು ಮೋದಿ ಸಂತಸ ಹಂಚಿಕೊಂಡಿದ್ದಾರೆ.