ಬೆಂಗಳೂರು: ಜಗ್ಗೇಶ್ ನಟನೆಯ ಮಠ, ಎದ್ದೇಳು ಮಂಜುನಾಥ, ಎರಡನೇ ಸಲ ಸೇರಿದಂತೆ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನ್ನಿಸಿಕೊಂಡಿದ್ದ ರಾಜ್ಯಪ್ರಶಸ್ತಿ ವಿಜೇತ ಗುರುಪ್ರಸಾದ್ (Guruprasad) ಅವರ ದೇಹವು ನವೆಂಬರ್ 03, 2024ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮೂಲತಃ ರಾಮನಗರ ಜಿಲ್ಲೆಯವರಾದ ಗುರುಪ್ರಸಾದ್ ಅವರು ಮಾದನಾಯಕನಹಳ್ಳಿಯ ಟಾಟಾ ನ್ಯೂ ಹೆವನ್ – ರಿವಾ ಕ್ಲಬ್‌ಹೌಸ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಗುರುಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗುವ ಮುನ್ನ ತಮ್ಮ ಎರಡನೇ ಪತ್ನಿ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಎದ್ದೇಳು ಮಂಜುನಾಥ-2 ಚಿತ್ರ ಬಿಡುಗಡೆಗೂ ಮುನ್ನ ಈ ಆಡಿಯೋ ಸಖತ್ ಸೌಂಡ್ ಮಾಡುತ್ತಿದೆ.
ಇದೀಗ ಗುರುಪ್ರಸಾದ್ (Guruprasad) ಅವರು ಸಾವಿಗೆ ಮುಂಚೆ ಅವರ ಪತ್ನಿಯೊಡನೆ ಆಡಿದ್ದ ಮಾತಿನ ಆಡಿಯೋ ವೈರಲ್ ಆಗಿದೆ. ಪತ್ನಿಯೊಡನೆ ಫೋನ್ನಲ್ಲಿ ಜಗಳವಾಡಿದ್ದ ಗುರುಪ್ರಸಾದ್, ನಿನಗೆ, ಮಗಳಿಗೆ ಏನಾದರೂ ಸ್ವಲ್ಪ ಹಣ ಮಾಡಿ ಸತ್ತು ಹೋಗಿಬಿಡುತ್ತೇನೆ ಎಂದು ಹೇಳಿರುವುದನ್ನು ಕೇಳಬಹುದಾಗಿದೆ. ಈ ಆಡಿಯೋವನ್ನ ಸ್ವತಃ ಗುರುಪ್ರಸಾದ್ ಅವರೇ ರೆಕಾರ್ಡ್ ಮಾಡಿದ್ದರು ಎಂದು ಹೇಳಲಾಗಿದ್ದು, ಅವರ ಆಪ್ತರ ಬಳಿ ಹಂಚಿಕೊಂಡಿದ್ದರಂತೆ.
ಎರಡನೇ ಪತ್ನಿ ಸುಮಿತ್ರ ಗುರುಪ್ರಸಾದ್ ಅವರು ನಟಿಸಿ, ನಿರ್ದೇಶಿಸಿರೋ ಕೊನೆಯ ಚಿತ್ರ ಎದ್ದೇಳು ಮಂಜುನಾಥ-2 ಸಿನಿಮಾ ಬಿಡುಗಡೆಗೆ ಸ್ಟೇ ತಂದ ಬೆನ್ನಲ್ಲೇ ಅವರ ಆಪ್ತ ಬಳಗ ಗುರುಪ್ರಸಾದ್ ಸಾವಿನ ಸತ್ಯ ಗೊತ್ತಾಗ್ಲಿ ಅಂತ ಆಡಿಯೋ ರಿಲೀಸ್ ಮಾಡಿದೆ ಎಂದು ಹೇಳಲಾಗಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.