ಭಾವನಗರ್: ಗುಜರಾತ್ನ ತಂಬೋಲಿ ಕ್ಯಾಸ್ಟಿಂಗ್ ಲಿಮಿಟೆಡ್ ಕಂಪನಿಯ ಚೇರ್ಮನ್ ಬಿಪಿನ್ ತಂಬೋಲಿ ಅವರ ಹಿರಿಯ ಪುತ್ರ ತನ್ನ ತಮ್ಮನಿಗೇ ಚೂರಿಯಿಂದ ಇರಿದ ಘಟನೆ ಶನಿವಾರ ನಡೆದಿದೆ.
ಮೆಹುಲ್ ತಂಬೋಲಿ ಆರೋಪಿ. ಕಂಪನಿಯ ನಿರ್ದೇಶಕ ಮಂಡಳಿಯ ಜನರಲ್ ಮೀಟಿಂಗ್ ನಡೆಯುತ್ತಿರುವಾಗಲೇ ತನ್ನ ತಮ್ಮನ ಹೊಟ್ಟೆಗೆ ಮೂರ್ನಾಲ್ಕು ಬಾರಿ ಇರಿದಿದ್ದಾನೆ.
ಭಾವನಗರದ ಸಿಟಿಯಿಂದ 24 ಕಿಮೀ ದೂರದಲ್ಲಿರುವ ಈ ಕಂಪನಿಯ ಕ್ಯಾಂಪಸ್ನಲ್ಲಿದ್ದ ಒಂದು ರೂಂನಲ್ಲಿ ಸಭೆ ನಡೆಯುತ್ತಿತ್ತು. ಜನರಲ್ ಮೀಟಿಂಗ್ನಲ್ಲಿ ಏಳು ಪ್ರಮುಖ ಅಧಿಕಾರಿಗಳು ಇದ್ದರು. ಆಗ ಚೇರ್ಮನ್ ಬಿಪಿನ್ ಅವರು ಮೆಹುಲ್ ಅವರನ್ನು ನಿರ್ದೇಶಕನ ಸ್ಥಾನದಿಂದ ತೆಗೆದು ಹಾಕುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವನ್ನಿಟ್ಟರು. ಇದರಿಂದ ವಿಪರೀತ ಕೋಪಗೊಂಡ ಮೆಹುಲ್ ಅಲ್ಲಿಯೇ ಇದ್ದ ತನ್ನ ತಮ್ಮ ವೈಭವ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ಕೂಡಲೇ ಮೆಹುಲ್ರನ್ನು ತಡೆದು, ವೈಭವ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈಭವ್ಗೆ ಸರ್ಜರಿ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೆಹುಲ್ ವಿರುದ್ಧ ಅವರ ತಂದೆ ಬಿಪಿನ್ ತಂಬೋಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಭೆಯಲ್ಲಿ ಇದ್ದ ಕಂಪನಿಯ ಉಪಾಧ್ಯಕ್ಷ ಪಿ.ಎ.ಸುಬ್ರಹ್ಮಣಿಯನ್, ಸ್ವತಂತ್ರ ನಿರ್ದೇಶಕ ಅಭಿನಂದನ್ ಜೈನ್, ಚಾರ್ಟರ್ಡ್ ಅಕೌಂಟಂಟ್ ಅಂಕಿತ್ ಹಾಗೂ ಇನ್ನೂ ಇಬ್ಬರು ಈ ದೂರಿಗೆ ಸಹಿ ಹಾಕಿದ್ದಾರೆ. ಇದನ್ನೂ ಓದಿ: ಪ್ರವಾಹದಲ್ಲಿ ಏರ್‌ಲಿಫ್ಟ್: ಯೋಧರ ಸಾಹಸಮಯ ರೋಚಕ ವಿಡಿಯೋ
ಕಂಪನಿಯ ಷೇರುದಾರರೊಂದಿಗೆ ಚರ್ಚೆ ಮಾಡಿದ ಬಳಿಕ ಮೆಹುಲ್ನನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕುವ ಪ್ರಸ್ತಾಪ ಇಡಲಾಗಿತ್ತು ಎಂದು ಬಿಪಿನ್ ತಿಳಿಸಿದ್ದಾರೆ.
ಮೆಹುಲ್ಗೆ 50 ವರ್ಷ ವಯಸ್ಸಾಗಿದ್ದು, ಸದ್ಯ ಪರಾರಿಯಾಗಿದ್ದಾರೆ. ಕುಟುಂಬದಲ್ಲಿ ಉದ್ಯಮಕ್ಕೆ ಸಂಬಂಧಪಟ್ಟಂತೆ ವ್ಯಾಜ್ಯವಿತ್ತು. ಅದೇ ಈ ಹಲ್ಲೆಗೆ ಕಾರಣ. ಮೆಹುಲ್ ಮತ್ತು ವೈಭವ್ ನಡುವೆ ಒಳ್ಳೆಯ ಸಂಬಂಧ ಇರಲಿಲ್ಲ. ಸದ್ಯ ಪ್ರಕರಣದ ತನಿಖೆ ಕೈಗೊಂಡಿದ್ದೇವೆ. ಮೆಹುಲ್ನನ್ನು ಪತ್ತೆ ಹಚ್ಚಿ, ಶೀಘ್ರವೇ ಬಂಧಿಸಲಾಗುವುದು ಎಂದು ಡಿಎಸ್ಪಿ ಮನೀಶ್ ಠಾಕರ್ ತಿಳಿಸಿದ್ದಾರೆ. ಹಾಗೇ ಟಿಸಿಎಲ್ ಭಾರತದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದು ಎಂದು ಹೇಳಲಾಗಿದೆ. (ಏಜೆನ್ಸೀಸ್)