ಬೆಂಗಳೂರು: ಸದ್ಯ ರಾಜ್ಯದಲ್ಲಿ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರರ 4 ನಾಲ್ಕು ಕ್ಷೇತ್ರಗಳಿಗೆ ಚುನಾವಣಾ ಸಮರ ಕಾವೇರಿದೆ. ಈ ನಡುವೆ ಗ್ರಾಮ ಪಂಚಾಯಿತಿ ಎಲೆಕ್ಷನ್ ಯಾವಾಗ ನಡೆಯಲಿದೆ? ಎಂಬ ಕುತೂಹಲ ಕೂಡ ಹೆಚ್ಚಾಗಿದ್ದು, ಇಂದು ತೆರೆ ಬೀಳುವ ಸಾಧ್ಯತೆ ಇದೆ.
ರಾಜ್ಯದ 6,021 ಗ್ರಾಪಂಗಳ 94 ಸಾವಿರ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಜ್ಜಾಗಿರುವ ರಾಜ್ಯ ಚುನಾವಣಾ ಆಯೋಗ, ನವೆಂಬರ್ ಅಂತ್ಯಕ್ಕೆ ಹಳ್ಳಿ ಫೈಟ್ ನಡೆಸಲು ಸನ್ನದ್ಧವಾಗಿದೆ. ಆದರೆ, ಪಂಚಾಯತ್ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿರುವ ಸರ್ಕಾರ, ಕರೊನಾ ನೆಪ ಹೇಳುತ್ತಿದೆ. ಈ ಸಂಬಂಧ ಇಂದು(ಅ.16) ಹೈಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ.
ಸದ್ಯ ಸುಮಾರು 18 ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಆಡಳಿತ ಯಂತ್ರ ಚುನಾವಣಾ ಕಾರ್ಯದಲ್ಲಿ ತೊಡಗಿದೆ. ಉಪ ಚುನಾವಣೆ ಮತ್ತು ಎಂಎಲ್ಸಿ ಸ್ಥಾನದ ಚುನಾವಣೆಗಳು ನ.12ಕ್ಕೆ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮುನ್ನವೇ ಗ್ರಾಪಂ ಚುನಾವಣೆ ನಡೆಸುವ ಸ್ಥಿತಿಯಲ್ಲಿ ಆಯೋಗ ಇಲ್ಲ. ಆದರೆ, ನವೆಂಬರ್ 12ರ ನಂತರ ವೇಳಾಪಟ್ಟಿ ಪ್ರಕಟಿಸಲು ಸಿದ್ಧ ಎಂದಿದೆ.
ಆಯೋಗ ಮತ್ತು ಸರ್ಕಾರದ ಅಭಿಪ್ರಾಯ ಕುರಿತು ಇಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ಅಂತಿಮ ತಿರ್ಮಾನ ಹೊರ ಬೀಳುವ ಸಾಧ್ಯತೆ ಇದೆ.