ನ್ಯೂಸ್

ಅನ್​ಲಾಕ್ 2.0 ಸರ್ಕಾರ ಸಿದ್ಧತೆ

Mandara

ನವದೆಹಲಿ: ಲಾಕ್​ಡೌನ್ ಮೊದಲ ಹಂತದ ಸಡಿಲಿಕೆ ಬಳಿಕ ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಪೂರ್ವಯೋಜನೆಯಂತೆ ಅನ್​ಲಾಕ್-2 ಜಾರಿಗೊಳಿಸುವ ಮೂಲಕ ಮತ್ತಷ್ಟು ನಿರ್ಬಂಧಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಇನ್ನೊಂದು ವಾರದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅನ್​ಲಾಕ್ 2.0ನಲ್ಲಿ ಶಿಕ್ಷಣ ಸಂಸ್ಥೆಗಳ ಪುನರಾರಂಭ ಮತ್ತು ಮೆಟ್ರೋ ಸೇವೆ ಆರಂಭಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿದೆ.

ವಲಸಿಗರಿಗೆ ಉತ್ತೇಜನ: ಅನ್​ಲಾಕ್ 2ರಲ್ಲಿ ವಲಸೆ ಕಾರ್ವಿುಕರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ ಎನ್ನಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಸ್ವಗ್ರಾಮಕ್ಕೆ ಹಿಂದಿರುಗಿರುವ ಕಾರ್ವಿುಕರಿಗೆ ಅವರ ರಾಜ್ಯದಲ್ಲೇ ಸೂಕ್ತ ಕೆಲಸ ಕೊಡಿಸುವ ಯೋಜನೆಗಳನ್ನು ರೂಪಿಸಲಾಗುತ್ತದೆ. ಕಾರ್ಖಾನೆಗಳಿಗೆ ಸ್ಥಳೀಯ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಉತ್ತೇಜನ ನೀಡಲಾಗುತ್ತದೆ ಎನ್ನಲಾಗಿದೆ.

ಮೆಟ್ರೋ ಅನಿಶ್ಚಿತತೆ: ಮುಂಬೈ, ದೆಹಲಿ, ಕೋಲ್ಕತ, ಚೆನ್ನೈ, ಬೆಂಗಳೂರಿನಂಥ ಮಹಾನಗರಗಳಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಆರಂಭಿಸಲು ಕೇಂದ್ರ ಹಿಂದೇಟು ಹಾಕಿದೆ. ಮೆಟ್ರೋ ವ್ಯವಸ್ಥೆ ಇರುವ ಎಲ್ಲ ನಗರಗಳೂ ಕರೊನಾತಂಕ ಎದುರಿಸುತ್ತಿವೆ. ಇದರ ಹೊರತಾಗಿಯೂ ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳು ಮೆಟ್ರೋ ಆರಂಭಿಸುವ ಸುಳಿವು ನೀಡಿವೆ. ಹೀಗಾಗಿ ಕೇಂದ್ರದ ನಿರ್ಧಾರ ಕುತೂಹಲ ಕೆರಳಿಸಿದೆ.