ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಶೇ.15 ಸಂಭಾವನೆ ಹೆಚ್ಚಿಸಿ ಆರೋಗ್ಯ ಇಲಾಖೆ ಆದೇಶಿಸಿದೆ. ಪ್ರಸಕ್ತ ವರ್ಷದ ಏ.1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಇದರೊಂದಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ರಾಜ್ಯಾದ್ಯಂತ 16,847 ಸಿಬ್ಬಂದಿಗೆ ವೇತನ ಹೆಚ್ಚಳದ ಅನುಕೂಲವಾಗಲಿದೆ. 3ರಿಂದ 5 ವರ್ಷ ಕೆಲಸ ಮಾಡಿದವರಿಗೆ ಶೇ.5 ರಷ್ಟು 5ರಿಂದ 10 ವರ್ಷ ಕಾಲ ಸೇವೆ ಮಾಡಿದವರಿಗೆ ಶೇ.10 ಹಾಗೂ 10 ವರ್ಷಕ್ಕಿಂತ ಮೇಲ್ಪಟ್ಟು ಕಾರ್ಯ ನಿರ್ವಹಿಸಿದ್ದ ಗುತ್ತಿಗೆ ನೌಕರರಿಗೆ ಶೇ.15 ವೇತನ ಹೆಚ್ಚಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಉದ್ಯೋಗಿಗಳ ಸಂಖ್ಯೆ 17,055 ಆಗಿದೆ. ಇವರೆಲ್ಲರಿಗೂ ಶೇ.15 ವೇತನ ಹೆಚ್ಚಿಸಲು 57 ಕೋಟಿ ರೂ. ಬೇಕಾಗುತ್ತದೆ. ಈ ಅನುದಾನವನ್ನು ಕೇಂದ್ರ ಸರ್ಕಾರ ಭರಿಸುವುದಿಲ್ಲ. ರಾಜ್ಯ ಸರ್ಕಾರವೇ ಕೊಡಲಿದೆ. ಆರ್ಥಿಕ ಇಲಾಖೆ ಸಹಮತದ ಮೇರೆಗೆ ಈಗಾಗಲೇ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ವೇತನ ಹೆಚ್ಚಿಸುವಂತೆ ಸಂಘದ 4 ವರ್ಷದಿಂದಲೂ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದರು. ಕೊನೆಗೂ ನೌಕರರ ಪ್ರತಿಭಟನೆಗೆ ಮಣಿದ ಸರ್ಕಾರ, ಪಿ.ಎನ್. ಶ್ರೀನಿವಾಸಚಾರಿ ವರದಿ ಆಧಾರದ ಮೇರೆಗೆ ವೇತನ ಹೆಚ್ಚಿಸಿದೆ.
ಸರ್ಕಾರಕ್ಕೆ ನೌಕರರ ಕೃತಜ್ಞತೆ: ವೃಂದವಾರು ಇದ್ದ ಸಂಘಗಳನ್ನು ಒಟ್ಟುಗೂಡಿಸಿ 4 ವರ್ಷಗಳಿಂದ ನಡೆಸಿದ ನಿರಂತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ವೇತನ ಹೆಚ್ಚಿಸಿರುವುದಕ್ಕೆ ನೌಕರರು ಹರ್ಷವ್ಯಕ್ತಪಡಿಸಿದ್ದಾರೆ. ಸಂಘದ ಅಧ್ಯಕ್ಷ ಶ್ರೀಕಾಂತಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಉಪ್ಪಾರ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಧನ್ಯವಾದ ಸಲ್ಲಿಸಿದ್ದಾರೆ. ಅಂತರ ಜಿಲ್ಲಾ ವರ್ಗಾವಣೆ, ಜೀವ ವಿಮೆ, ಆರೋಗ್ಯ ವಿಮೆ, ಸೇವಾ ಭದ್ರತೆ ಮತ್ತು ನೌಕರಿ ಕಾಯಂ ಬಗ್ಗೆಯೂ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ವಿಶ್ವಾರಾಧ್ಯ ಯಮೋಜಿ ಮನವಿ ಮಾಡಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ನೌಕರರು?: ಬಾಗಲಕೋಟೆ 556, ಬಳ್ಳಾರಿ 817, ಬಿಬಿಎಂಪಿ 1,186, ಬೆಳಗಾವಿ 1,043, ಬೆಂ.ಗ್ರಾಮಾಂತರ 205, ಬೆಂಗಳೂರು ನಗರ 817, ಬೀದರ್ 498, ಚಾಮರಾಜನಗರ 317, ಚಿಕ್ಕಬಳ್ಳಾಪುರ 368, ಚಿಕ್ಕಮಗಳೂರು 493, ಚಿತ್ರದುರ್ಗ 475, ದಕ್ಷಿಣ ಕನ್ನಡ 435, ದಾವಣಗೆರೆ 532, ಧಾರವಾಡ 524, ಗದಗ 371, ಹಾಸನ 562, ಹಾವೇರಿ 459, ಕಲಬುರಗಿ 904, ಕೊಡಗು 197, ಕೋಲಾರ 530, ಕೊಪ್ಪಳ 453, ಮಂಡ್ಯ 410, ಮೈಸೂರು 667, ರಾಯಚೂರು 568, ರಾಮನಗರ 296, ಶಿವಮೊಗ್ಗ 554, ತುಮಕೂರು 684, ಉಡುಪಿ 311, ಉತ್ತರ ಕನ್ನಡ 454, ವಿಜಯನಗರ 55, ವಿಜಯಪುರ 592, ಯಾದಗಿರಿ 411, ರಾಜ್ಯ 93 ಸೇರಿ 16,847 ನೌಕರರಿದ್ದಾರೆ.