| ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
ರಾಜ್ಯದಲ್ಲಿ ಪ್ರತಿ ವರ್ಷ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಈರುಳ್ಳಿ ಸತತ 3 ವರ್ಷ ವರುಣನ ಆರ್ಭಟ, ನೆರೆ ಹಾವಳಿಗೆ ಸಿಲುಕಿ ಶೇ. 50ರಿಂದ 75 ನಾಶವಾಗಿದೆ. ತೀವ್ರ ಸಂಕಷ್ಟ ಎದುರಿಸಿರುವ ನಾಡಿನ ಅನೇಕ ಬೆಳೆಗಾರರು ಈ ಬಾರಿ ಅಡಕೆ ಒಳಗೊಂಡು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ. ಹೀಗಾಗಿ, ಇಳುವರಿ ಕುಂಠಿತವಾದರೆ, ಮಳೆಯಿಂದಾಗಿ ಹಾನಿಯಾದರೆ, ಸೆಪ್ಟೆಂಬರ್ ಒಳಗೆ ಈರುಳ್ಳಿ ಬೆಲೆ ಟೊಮ್ಯಾಟೋದಂತೆ ಏರಿಕೆಯಾಗುವ ಸಾಧ್ಯತೆ ಕಂಡುಬರುತ್ತಿದೆ.
ಹೆಚ್ಚಿನ ಈರುಳ್ಳಿ ಬೆಳೆಯುವಲ್ಲಿ ಮಹಾರಾಷ್ಟ್ರ ಮೊದಲ ಹಾಗೂ ಕರ್ನಾಟಕ ದ್ವಿತೀಯ ಸ್ಥಾನದಲ್ಲಿವೆ. ಮಹಾರಾಷ್ಟ್ರದಲ್ಲಿ 5 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ, ಕರ್ನಾಟಕದಲ್ಲಿ 1.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿಯನ್ನು ಬೆಳೆಯಲಾಗುತ್ತಿದೆ. ಮಧ್ಯಪ್ರದೇಶ, ಬಿಹಾರ, ಗುಜರಾತ್, ರಾಜಸ್ಥಾನ, ಹರಿಯಾಣ, ಆಂಧ್ರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಈರುಳ್ಳಿಯನ್ನು ಬೆಳೆಯಲಾಗುತ್ತದೆ. 2019-20, 2020-21ರಲ್ಲಿ ಸತತ ಮಳೆ, ನೆರೆ ಹಾವಳಿಯಿಂದಾಗಿ ತೇವಾಂಶ ಹೆಚ್ಚಾಗಿ, ಕೊಳೆ ರೋಗವು ಈ ಬೆಳೆಗೆ ಕಾಣಿಸಿಕೊಂಡಿದೆ. ಹಲವೆಡೆ ಶೇ. 60ರಷ್ಟು ಕೊಳೆತು ನಾಶವಾಗಿದ್ದರಿಂದ ರೈತರು ಕಣ್ಣೀರಿನಲ್ಲಿ ಕೈತೊಳೆದಿದ್ದಾರೆ. ಆ ವೇಳೆ ಈರುಳ್ಳಿ ಬೆಲೆ ಕೆ.ಜಿಗೆ 100 ರೂ., 120 ರೂ. ಗಡಿ ದಾಟಿತ್ತು.
ಕರ್ನಾಟಕದದಲ್ಲಿ ಈರುಳ್ಳಿಯನ್ನು ಚಿತ್ರದುರ್ಗ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 2021-22ರಲ್ಲಿ 21,580, 2022-23ರಲ್ಲಿ 23,320 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಪ್ರಸಕ್ತ 2023-24ರ ಮುಂಗಾರು ಅವಧಿಯಲ್ಲಿ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗುರಿ ಹೊಂದಲಾಗಿದ್ದು, ಮಳೆ ವಿಳಂಬದಿಂದಾಗಿ ಮೇ ತಿಂಗಳಿಂದ ಈವರೆಗೂ 5,846 ಹೆಕ್ಟೇರ್ ಬಿತ್ತನೆಯಾಗಿದ್ದು, ಗುರಿಗೆ ಹೋಲಿಸಿದರೆ ಶೇ. 25 ಬಿತ್ತನೆಯಾಗಿಲ್ಲ.
ಹಿಂದೆಲ್ಲ ಬಾಗಲಕೋಟೆ ಜಿಲ್ಲೆಯಲ್ಲಿ 31,356, ಗದಗನಲ್ಲಿ 30,843, ವಿಜಯಪುರದಲ್ಲಿ 23,057 ಹೆಕ್ಟೇರ್ ಒಳಗೊಂಡು ವಿವಿಧ ಜಿಲ್ಲೆಗಳು ಸೇರಿ ಮುಂಗಾರು-ಹಿಂಗಾರು ಅವಧಿಯಲ್ಲಿ 2 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ರೈತರು ಉತ್ಸುಕರಾಗುತ್ತಿದ್ದರು. ಕೃಷಿ ಇಲಾಖೆ ಗುರಿಗಿಂತಲೂ ಎರಡ್ಮೂರು ಪಟ್ಟು ಹೆಚ್ಚಾಗಿಯೇ ಉತ್ಪಾದನೆಯಲ್ಲಿ ತೊಡಗುತ್ತಿದ್ದರು. ಆದರೆ, ಮಳೆ ಹಾನಿ, ಬೆಲೆ ಕುಸಿತ, ವಿವಿಧ ರೋಗ ಬಾಧೆಯಿಂದಾಗಿ ಶೇ. 30ರಿಂದ 50 ರೈತರು ವಿಮುಖರಾದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಬಿತ್ತನೆ ಬೀಜ, ರಸಗೊಬ್ಬರ ಬೆಲೆ ದುಪ್ಪಟ್ಟು ಆಗಿರುವ ಕಾರಣ ಈರುಳ್ಳಿ ಬೆಳೆಯಲು ಎಕರೆಗೆ 60 ಸಾವಿರ ರೂ. ಖರ್ಚು ತಗುಲುತ್ತದೆ. ಒಂದು ವೇಳೆ ಅಧಿಕ ಮಳೆಯಿಂದ ಕೊಳೆತರೆ ಹಾಕಿದ ಹಣವೂ ಹಿಂದಿರುಗದ ಪರಿಸ್ಥಿತಿ ಇದೆ. ಸಾಲ ಮಾಡಿ ಜಮೀನು ಮಾರಾಟಕ್ಕೂ ಮುಂದಾಗಿದ್ದಾರೆ. | ಹಂಪಯ್ಯನಮಾಳಿಗೆ ಧನಂಜಯ, ತಾಲೂಕು ಅಧ್ಯಕ್ಷ, ರೈತಸಂಘ, ಚಿತ್ರದುರ್ಗ
ವಿದೇಶಕ್ಕೂ ರಫ್ತು: ಐದಾರು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ವಾರ್ಷಿಕ ಸರಾಸರಿ 45 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗುತ್ತಿತ್ತು. ಈ ವೇಳೆ 6.99 ಲಕ್ಷ ಟನ್ ಈರುಳ್ಳಿ ಉತ್ಪಾದಿಸುವ ಗುರಿ ಹೊಂದಲಾಗಿತ್ತು. ಗುಣಮಟ್ಟದ ಈರುಳ್ಳಿಯು ಮಲೇಷಿಯಾ, ಶ್ರೀಲಂಕಾ, ಬಾಂಗ್ಲಾ ಮೊದಲಾದ ದೇಶಗಳಿಗೆ ರಫ್ತಾಗುತ್ತಿತ್ತು. ಆದರೀಗ ಮುಂಗಾರು ಅವಧಿಯಲ್ಲಿ ಬಿತ್ತನೆ ಪ್ರಮಾಣದಲ್ಲಿ ಇಳಿಕೆಯಾಗಿದೆ.