ನ್ಯೂಸ್

’ಗಾಡ್ ಪ್ರಾಮಿಸ್’ ಎಂದ 'ಕಾಂತಾರ' ನಟ; ನಿರ್ದೇನಕ್ಕಿಳಿದ ಸೂಚನ್ ಶೆಟ್ಟಿ

ಬೆಂಗಳೂರು: ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ರವಿ ಬಸ್ರೂರ್ ಕೂಡ ಒಬ್ಬರು. ಕೆಜಿಎಫ್ ಸರಣಿ ಸಿನಿಮಾ ಬಹುದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್, ಟಾಲಿವುಡ್​ಗಳಿಗೂ ಪಯಣಿಸಿರುವ ಅವರು ಸ್ಟಾರ್ ಹೀರೋ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರ ಗರಡಿಯಿಂದ ಬಂದ ಸಾಕಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡುತ್ತಿದ್ದಾರೆ. ಇದೀಗ ರವಿ ಬಸ್ರೂರ್ ಅಖಾಡದಿಂದ ಯುವ ಸಿನಿಮೋತ್ಸಾಹಿಗಳು ಸ್ಯಾಂಡಲ್​ವುಡ್​ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೀಗ ನಿರ್ದೇಶಕರಾದ ಸೂಚನ್ ಶೆಟ್ಟಿ, ಹೊಸ ಪಯಣ ಪ್ರಾರಂಭಿಸಲು ಸಜ್ಜಾಗಿದ್ದಾರೆ.

ಸೂಚನ್ ಶೆಟ್ಟಿ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, ತಮ್ಮ ಚೊಚ್ಚಲ ಪ್ರಯತ್ನದ ಸಿನಿಮಾಗೆ 'ಗಾಡ್ ಪ್ರಾಮಿಸ್' ಎಂಬ ಕ್ಯಾಚಿ ಟೈಟಲ್ ಇಟ್ಟಿದ್ದಾರೆ. ರವಿ ಬಸ್ರೂರ್ ಸಾರಥ್ಯದ ಕಟಕ, ಗಿರ್ಮಿಟ್, ಕಡಲ್ ಸಿನಿಮಾಗಳಿಗೆ ಬಹರಗಾರನಾಗಿ, ಸಹ ನಿರ್ದೇಶಕನಾಗಿ, ನಟನಾಗಿ ಕೆಲಸ ಮಾಡಿರುವ ಸೂಚನ್, ಈ ಅನುಭವದೊಂದಿಗೆ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ.

ಪ್ಯಾನ್ ಇಂಡಿಯಾ 'ಕಾಂತಾರ' ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ, ರವಿ ಬಸ್ರೂರ್ ಅವರ ಕಡಲ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಸೂಚನ್ ಶೆಟ್ಟಿ, ಈಗ ಗಾಡ್ ಪ್ರಾಮಿಸ್ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವಂತಹ ಸಿನಿಮಾ ಮಾಡುವ ಕನಸಿನೊಂದಿಗೆ 2016ರಲ್ಲಿ ಶುರುವಾದ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಚೊಚ್ಚಲ ಕನಸಿಗೆ ಜತೆಯಾಗಿದೆ. 'ಗಾಡ್ ಪ್ರಾಮಿಸ್' ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್​ನಡಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ ಗಾಡ್ ಪ್ರಾಮಿಸ್. ಹಳ್ಳಿ ಸೊಗಡನ್ನು ಬಿಂಬಿಸುವ ಟೈಟಲ್ ಪೋಸ್ಟರ್ ಸದ್ಯ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ನವೀನ್ ಶೆಟ್ಟಿ ಈ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಯಶಸ್ವಿ ತಂತ್ರಜ್ಞನರ ಸಿನಿಮಾವಾಗಿರುವ 'ಗಾಡ್ ಪ್ರಾಮಿಸ್' ತಂಡದಲ್ಲಿ ಯಾವೆಲ್ಲಾ ಕಲಾಬಳಗ ಇರಲಿದೆ ಅನ್ನೋದು ಚಿತ್ರತಂಡ ಶೀಘ್ರದಲ್ಲೇ ರಿವೀಲ್ ಮಾಡಲಿದೆ. ಮಾರ್ಚ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.