ಪಣಜಿ: 2017ರಲ್ಲಿ ಗೋವಾದಲ್ಲಿ ಬ್ರಿಟಿಷ್ ಪ್ರವಾಸಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ವಿಕಾಸ್ ಭಗತ್ಗೆ ಗೋವಾ ನ್ಯಾಯಾಲಯವು ಜೀವಾವಧಿ ಶಿಕ್ಷೆ(Life Imprisonment) ವಿಧಿಸಿದೆ. ಕಳೆದ ಶುಕ್ರವಾರ ನ್ಯಾಯಾಲಯವು ವಿಕಾಸ್ ಭಗತ್‌ನನ್ನು ದೋಷಿ ಎಂದು ತೀರ್ಪು ನೀಡಿತ್ತು.
ಎಂಟು ವರ್ಷಗಳ ನಂತರ ಐರಿಶ್-ಬ್ರಿಟಿಷ್ ಪ್ರಜೆಯಾಗಿದ್ದ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಟ್ಟಿತು. ಡೇನಿಯಲ್ ಮೆಕ್‌ಲೌಗ್ಲಿನ್ ಎಂಬಾಕೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಆತನನ್ನು ತಪ್ಪಿತಸ್ಥನೆಂದು ಕೋರ್ಟ್ ಘೋಷಿಸಿತು. 2017 ಮಾರ್ಚ್ 14ರಂದು ದಕ್ಷಿಣ ಗೋವಾದ ಕೆನಕೋನಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬ್ರಿಟಿಷ್ ಪ್ರವಾಸಿ ಡೇನಿಯಲ್ ಅವರ ಶವ ಪತ್ತೆಯಾಗಿತ್ತು.
2017ರಲ್ಲಿ ಐರಿಶ್-ಬ್ರಿಟಿಷ್ ಪ್ರಜೆ ಡೇನಿಯಲ್ ಮೆಕ್‌ಲೌಗ್ಲಿನ್ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 31 ವರ್ಷದ ಸ್ಥಳೀಯ ವ್ಯಕ್ತಿ ವಿಕಾಸ್ ಭಗತ್ಗೆ ಗೋವಾ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕ್ಷಾಮಾ ಜೋಶಿ ಸೋಮವಾರ ವಿಕಾಸ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಜತೆಗೆ ಅತ್ಯಾಚಾರ ಮತ್ತು ಕೊಲೆಗೆ 25,000 ರೂಪಾಯಿ ದಂಡ ಹಾಗೂ ಸಾಕ್ಷ್ಯ ನಾಶಕ್ಕೆ 10,000 ರೂಪಾಯಿ ದಂಡ ವಿಧಿಸಲಾಗಿದೆ.
ಸಂತ್ರಸ್ತೆಯ ತಾಯಿ ಆಂಡ್ರಿಯಾ ಬ್ರಾನ್ನಿಗನ್ ಪರ ವಕೀಲರಾದ ವಿಕ್ರಮ್ ವರ್ಮಾ, ಸಾಕ್ಷ್ಯಗಳನ್ನು ನಾಶಪಡಿಸಿದ್ದಕ್ಕಾಗಿ ನ್ಯಾಯಾಲಯವು ಅಪರಾಧಿಗೆ ಹೆಚ್ಚುವರಿಯಾಗಿ ಎರಡು ವರ್ಷಗಳ ಶಿಕ್ಷೆಯನ್ನು ನೀಡಿದೆ. ಅದು ಶಿಕ್ಷೆಯೊಂದಿಗೆ ಏಕಕಾಲದಲ್ಲಿ ಅನ್ವಯಿಸುತ್ತದೆ ಎಂದು ಹೇಳಿದರು. ಸಂತ್ರಸ್ತೆಯ ಕುಟುಂಬವು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ನ್ಯಾಯಕ್ಕಾಗಿ ಹೋರಾಟದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಇನ್ಸ್‌ಪೆಕ್ಟರ್ ಫಿಲೋಮಿನಾ ಕೋಸ್ಟಾ, ಇದು ಅತ್ಯಂತ ಸೂಕ್ಷ್ಮವಾದ ತನಿಖೆಯಾಗಿದ್ದು ಅಪರಾಧಿಗೆ ಶಿಕ್ಷೆಯಾಗಿದೆ ಎಂದು ಹೇಳಿದರು.
ಗೋವಾಕ್ಕೆ ಭೇಟಿ ನೀಡಲು ಬಂದಿದ್ದ ಬ್ರಿಟಿಷ್ ಪ್ರವಾಸಿ ಡೇನಿಯಲ್ ಅವರ ದೇಹವು 2017 ಮಾರ್ಚ್ 14ರಂದು ಕ್ಯಾನಕೋನಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೆತ್ತಲೆಯಾಗಿ ರಕ್ತದಲ್ಲಿ ತೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರೋಪಪಟ್ಟಿಯ ಪ್ರಕಾರ, ಡೇನಿಯಲ್ ಗೋವಾ ಪ್ರವಾಸದಲ್ಲಿದ್ದಾಗ ವಿಕಾಸ್ ಅವಳೊಂದಿಗೆ ಸ್ನೇಹ ಬೆಳೆಸಿ ನಂತರ ಅವಳನ್ನು ಕೊಲೆ ಮಾಡಿದ್ದಾನೆ. ಕೊಲೆಯಾದ ನಂತರ ಡೇನಿಯಲ್‌ನ ದೇಹವು ರಕ್ತಸಿಕ್ತದಿಂದ ನಗ್ನವಾಗಿ ತಲೆ ಮತ್ತು ಮುಖದ ಮೇಲೆ ಗಾಯಗಳಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.(ಏಜೆನ್ಸೀಸ್)