ನ್ಯೂಸ್

ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ

ಬೆಂಗಳೂರು: ರಾಜ್ಯಪತ್ರ ಹೊರಡಿಸುವ ಮೂಲಕ ಆ ವರ್ಗದವರಿಗೆ ಮೀಸಲು ಸೌಲಭ್ಯ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಇನ್ನೇನು ಶಾಲೆ-ಕಾಲೇಜು ಪ್ರಾರಂಭವಾಗಲಿವೆ. ಕೆಪಿಎಸ್​ಸಿ ಮತ್ತಿತರ ಪ್ರಾಧಿಕಾರಗಳು ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಿವೆ. ಪರಿವಾರ, ತಳವಾರ ಸಮುದಾಯಗಳು ಪರಿಶಿಷ್ಟ ಪಂಗಡದ ಮೀಸಲು ಸೌಲಭ್ಯ ಪಡೆಯಬೇಕಾದರೆ ಕೇಂದ್ರ ಸರ್ಕಾರದ ತೀರ್ವನವನ್ನು ತಕ್ಷಣ ರಾಜ್ಯಪತ್ರದಲ್ಲಿ ಹೊರಡಿಸುವುದು ಅಗತ್ಯವಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ತಳವಾರ, ಪರಿವಾರ ಸಮುದಾಯದ ಬೇಡಿಕೆಯಂತೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಚಿವ ಸಂಪುಟದಲ್ಲಿ ತೀರ್ವನಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. 6 ವರ್ಷಗಳ ನಂತರ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈಗ ಅದನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ದೂರಿದ್ದಾರೆ.