ನ್ಯೂಸ್

BiggBoss ಮನೆಯಲ್ಲಿ ದೆವ್ವದ ಕಾಟ; ದಿಕ್ಕಾಪಾಲಾಗಿ ಓಡಿದ ಸ್ಫರ್ಧಿಗಳು

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (BiggBoss) ಶುರುವಾಗಿ 10ಕ್ಕೂ ಅಧಿಕ ವಾರಗಳು ಕಳೆದಿದ್ದು, ದಿನ ಕಳೆದಂತೆ ರೋಷಕತೆ ಹೆಚ್ಚಿಸುತ್ತಿದೆ. ಈ ವಾರ ಮನೆಯ ಕ್ಯಾಪ್ಟನ್​ ಆಗಿ ಭವ್ಯಾ ಆಯ್ಕೆಯಾಗಿದ್ದು, ಕಳಪೆ ಪಟ್ಟವನ್ನು ಸ್ಫರ್ಧಿಗಳು ಒಮ್ಮತದಿಂದ ಚೈತ್ರಾ ಅವರಿಗೆ ನೀಡಿದ್ದಾರೆ. ಇದೆಲ್ಲದರ ನಡುವೆ ಬಿಗ್​ಬಾಸ್​ ಮನೆಯಲ್ಲಿ ದೆವ್ವದ ಕಾಟ ಶುರುವಾಗಿದ್ದು, ಸ್ಫರ್ಧಿಗಳು ಕಂಗಾಲಾಗಿ ಕೂಗಾಡಲು ಶುರು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋ ಸಖತ್​ ವೈರಲ್​ ಆಗಿದೆ.

ಸದ್ಯ ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ ಬಿಗ್​ಬಾಸ್​ ಮನೆಯಲ್ಲಿ ದೆವ್ವವೊಂದು ಕಾಣಿಸಿಕೊಂಡಿದ್ದು, ಅಡುಗೆಮನೆಯಲ್ಲಿ ಗೌತಮಿ, ಮೋಕ್ಷಿತಾ ಹಾಗೂ ಮಂಜು ಕೂಗಾಡಲು ಶುರು ಮಾಡುತ್ತಾರೆ. ಇದನ್ನು ಕೇಳಿಸಿಕೊಂಡು ಗಾಬರಿಯಿಂದ ಓಡಿ ಬರುವ ಮನೆಯ ಇತರೆ ಸದಸ್ಯರು ದೆವ್ವ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಈ ವೇಳೆ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಚೈತ್ರಾ ನೆಲದ ಮೇಲೆ ಬೀಳುತ್ತಾರೆ. ಇದೇ ವೇಳೆ ಮನೆಯ ಮುಖ್ಯದ್ವಾರದಿಂದ ನೂರು ಜನ್ಮಕ್ಕೂ ಸೀರಿಯಲ್​ ತಾರೆಗಳು ಎಂಟ್ರಿ ಕೊಟ್ಟಿದ್ದು, ಸದ್ಯ ಈ ಪ್ರೋಮೋ ವೈರಲ್​ ಆಗಿದೆ.

ಬಿಗ್​ಬಾಸ್​ ಮನೆಯಲ್ಲಿ ಆಗಿಂದಾಗೆ ದೆವ್ವ ಇರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿರುತ್ತವೆ. ಅದಕ್ಕೆ ಪೂರಕವೆಂಬಂತೆ ಲೋಟ, ತಟ್ಟೆಗಳು ತನ್ನಿಂದ ತಾನೆ ಬೀಳುತ್ತಿರುತ್ತವೆ, ಬಹುತೇಕ ಪ್ರತಿ ಸೀಸನ್​ನಲ್ಲಿಯೂ ಇದು ನಡೆಯುತ್ತಲೇ ಬಂದಿದೆ. ಇದೀಗ ಸೀರಿಯಲ್​ ಪ್ರಮೋಷನ್​ಅನ್ನು ತುಸು ವಿಭಿನ್ನವಾಗಿ ಮಾಡುವ ಮೂಲಕ ಬಿಗ್​ಬಾಸ್​ ಟೀಮ್​ ಸ್ಫರ್ಧಿಗಳು ಹಾಗೂ ಪ್ರೇಕ್ಷಕರಿಗೆ ಭಯವನ್ನು ಹುಟ್ಟಿಸಿದ್ದು, ಸದ್ಯ ಬಿಡುಗಡೆಯಾಗಿರುವ ಪ್ರೋಮೋ ಸಖತ್​ ವೈರಲ್​ ಆಗುತ್ತಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (Bigg Boss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.