ನ್ಯೂಸ್

ಗ್ಯಾಂಗ್​​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​ಗೂ ಮುನ್ನ ಸ್ಥಳದಲ್ಲಿ ನಡೆದಿತ್ತು ಭಾರಿ ಹೈಡ್ರಾಮ!

ಲಖನೌ: ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದ ಪೊಲೀಸ್​​ ಎನ್​​ಕೌಂಟರ್​ನಲ್ಲಿ ಕಾನ್ಪುರ ಪೊಲೀಸರ ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್​ಸ್ಟರ್​​ ವಿಕಾಸ್​ ದುಬೆ ಬಲಿಯಾಗಿದ್ದಾನೆ. ಘಟನೆಯಲ್ಲಿ ನಾಲ್ವರು ಪೊಲೀಸರಿಗೂ ಗಂಭೀರ ಗಾಯವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಕಾನ್ಪುರದ ಪೊಲೀಸ್​ ವರಿಷ್ಠಾಧಿಕಾರಿ, ಪೊಲೀಸ್ ವಾಹನ ಉರುಳಿಬಿದ್ದ ಬೆನ್ನಲ್ಲೇ ಸಿಬ್ಬಂದಿಯೊಬ್ಬರ ಗನ್​ ಕಸಿದುಕೊಂಡು ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ, ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ಶರಣಾಗತಿ ಆಗುವಂತೆ ಕೇಳಲಾಯಿತು. ಆದರೆ, ಪೊಲೀಸರ ಮೇಲೆಯೇ ದುಬೆ ಗುಂಡಿನ ದಾಳಿ ನಡೆಸಿದ. ಆತ್ಮರಕ್ಷಣೆಗಾಗಿ ನಮ್ಮ ಪೊಲೀಸರು ಸಹ ದುಬೆ ವಿರುದ್ಧ ಗುಂಡಿನ ದಾಳಿ ನಡೆಸಿದರು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಗುರುವಾರವಷ್ಟೇ ಮಧ್ಯಪ್ರದೇಶದ ಉಜ್ಜೈನ್​ನಲ್ಲಿ ಬಂಧನಕ್ಕೊಳಗಾದ ದುಬೆಯನ್ನು ಇಂದು ಬೆಳಗ್ಗೆ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಪೊಲೀಸ್​ ವಾಹನ ಉರುಳಿಬಿದ್ದಿತ್ತು. ಇದೇ ಅವಕಾಶವೆಂದುಕೊಂಡ ದುಬೆ ಸಿಬ್ಬಂದಿಯ ಗನ್​ ಕಸಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಆತನ ಯತ್ನ ಎನ್​ಕೌಂಟರ್​ನಲ್ಲಿ ಕೊನೆಯಾಗಿದೆ.

ಪೊಲೀಸರಿಗೂ ಗಾಯ

ದುಬೆ ಹಾಗೂ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್​ಟಿಎಫ್​) ನಡುವೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಪೊಲೀಸರು ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನೂ ಸಹ ಲಾಲಾ ಲಜಪತ್​ ರಾಯ್​ ಅಥವಾ ಹಲ್ಲೆಟ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಹಿನ್ನೆಲೆ ಏನು?

ಕಾನ್ಪುರ ಸಮೀಪದ ಡಿಕ್ರು ಗ್ರಾಮದಲ್ಲಿ ವಿಕಾಸ್ ದುಬೆ ಎಂಬ ಕ್ರಿಮಿನಲ್ ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಆತನ ಬಂಧನಕ್ಕೆ ಬಲೆ ಬೀಸಿತ್ತು. ವಿಕಾಸ್ ದುಬೆ 60 ಅಪರಾಧ ಪ್ರಕರಣಗಳಲ್ಲಿ ಬೇಕಾದವನಾಗಿದ್ದ. ಜುಲೈ 3ರ ತಡ ರಾತ್ರಿ ಕಾರ್ಯಾಚರಣೆ ಆರಂಭವಾಗಿತ್ತು. ಅಂದು ನಸುಕಿನ ವೇಳೆ ವಿಕಾಸ್​ ದುಬೆಯ ಅಡಗುದಾಣದ ರೂಫ್​ ಟಾಪ್​ನಿಂದ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ ಡಿಎಸ್​ಪಿ ಸೇರಿದಂತೆ 8 ಪೊಲೀಸರ ಹತ್ಯೆ ನಡೆದಿತ್ತು. (ಏಜೆನ್ಸೀಸ್​)