ನ್ಯೂಸ್

2ನೇ ದಿನವೂ ಕಲೆಕ್ಷನ್​ನಲ್ಲಿ ಕುಸಿತ ಕಂಡ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ!

ಹೈದರಾಬಾದ್: ಕೃಷ್ಣ ಚೈತನ್ಯ ನಿರ್ದೇಶನದ ವಿಶ್ವಕ್ ಸೇನ್ ಅಭಿನಯದ ಬಹುನಿರೀಕ್ಷಿತ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಇಂದಿಗೆ ಎರಡು ದಿನಗಳು ಕಳೆದಿವೆ. ಬಹುತೇಕ ಥಿಯೇಟರ್​ಗಳಲ್ಲಿ ಭರ್ಜರಿ ಓಪನಿಂಗ್ ಪಡೆದ ಈ ಸಿನಿಮಾ, ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಬೆಳವಣಿಗೆ ನೋಡುವಲ್ಲಿ ಮಾತ್ರ ವಿಫಲವಾದಂತೆ ತೋರುತ್ತಿದೆ.

ಕನ್ನಡದಲ್ಲಿ ರಿಲೀಸ್ ಆದ 'ಮುಂಗಾರು ಮಳೆ 2' ಚಿತ್ರದ ನಾಯಕಿ ನೇಹಾ ಶೆಟ್ಟಿ ಮತ್ತು ತೆಲುಗು ನಟಿ ಅಂಜಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಗ್ಯಾಂಗ್ಸ್​ ಆಫ್​ ಗೋದಾವರಿ' ಮೇ 31, 2024ರಂದು ಬಿಡುಗಡೆಯಾಯಿತು. ಈ ಚಿತ್ರದ ಮೇಲೆ ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆಗಳು ವ್ಯಕ್ತವಾಗಿತ್ತು. ಆದರೆ, ಬಾಕ್ಸ್​ ಆಫೀಸ್ ಲೆಕ್ಕಾಚಾರಗಳು ಮಾತ್ರ ಯಾಕೋ ತಲೆಕೆಳಗಾಗುವಂತೆ ಕಾಣುತ್ತಿದೆ.

ಸಿನಿ ವರದಿಗಳ ಪ್ರಕಾರ, ಚಿತ್ರವು ಮೊದಲ ದಿನದಲ್ಲಿ 12.1 ಕೋಟಿ ರೂ. ಗಳಿಕೆ ಕಂಡರೂ ಎರಡನೇ ದಿನದ ಮುಕ್ತಾಯಕ್ಕೆ ಗಣನೀಯವಾಗಿ ಕುಸಿತ ಕಂಡಿದೆ. ಮೊದಲ ದಿನದ ಕಲೆಕ್ಷನ್‌ಗೆ ಹೋಲಿಸಿದರೆ 4 ಕೋಟಿ ರೂ.ಗಳ ವ್ಯತ್ಯಾಸ ಉಂಟಾಗಿದೆ. ಇದು ಚಿತ್ರತಂಡದ ದೀರ್ಘಾವಧಿಯ ನಿರೀಕ್ಷೆಗಳ ಮೇಲೆ ಭಾರೀ ಕಳವಳ ಮೂಡಿಸಿದೆ.

ಚಿತ್ರದಲ್ಲಿ ಸಾಯಿಕುಮಾರ್, ಅಂಜಲಿ, ನೇಹಾ ಶೆಟ್ಟಿ, ಗೋಪರಾಜು ರಮಣ, ಆಯೇಶಾ ಖಾನ್, ಹೈಪರ್ ಆದಿ ಸೇರಿದಂತೆ ಮುಂತಾದವರ ತಾರಾಗಣವಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸಿರುವ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತವಿದೆ,(ಏಜೆನ್ಸೀಸ್).