ಬೆಂಗಳೂರು: ‘ಮನೆ ಮನೆಗೆ ಗಂಗೆ’ ಹೆಸರಿನಲ್ಲಿ ಇನ್ನು ಮೂರು ವರ್ಷದಲ್ಲಿ ರಾಜ್ಯದಲ್ಲಿ ಪ್ರತಿ ಮನೆಗೂ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರ ರೂಪುರೇಷೆ ಸಿದ್ಧಪಡಿಸಿದೆ ಎಂದು ಗ್ರಾಮೀಣಾಭಿವೃದ್ಶಿ ಸಚಿವ ಕೆ.ಎಸ್. ಈಶ್ವರಪ್ಪ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಇಂಜಿನಿಯರ್ಗಳ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಯಡಿ ರಾಜ್ಯದ 65 ಲಕ್ಷ ಮನೆಗಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಗೆ ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 4 ಸಾವಿರ ಕೋಟಿ ವೆಚ್ಚ ಮಾಡಲಿದೆ. ಆಗಸ್ಟ್ನಲ್ಲಿ ಈ ಯೋಜನೆ ಲೋಕಾರ್ಪಣೆ ಮಾಡಲಾಗುವುದು. ಅ.2ರ ಗಾಂಧಿ ಜಯಂತಿಯಂದು ಮನೆ ಮನೆಗೆ ಗಂಗೆ ಯೋಜನೆ ಸಹಕಾರವಾಗಲಿದೆ ಎಂದರು.
ದೂರು ಬಂದರೆ ಕ್ರಮ: ನರೇಗಾ ಹಣ ಫಲಾನುಭವಿಗಳ ಹಣ ಕೆಲವು ಕಡೆ ಮಧ್ಯವರ್ತಿಗಳ ಪಾಲಾಗ್ತಿದೆ ಅನ್ನೋ ದೂರಿದ್ದು, ಈ ಬಗ್ಗೆ ಯಾವುದಾದರೂ ದೂರು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಒಳಚರಂಡಿಯಲ್ಲೂ ಕರೊನಾ ವೈರಸ್ ಪತ್ತೆ!
ರಾಜಕೀಯ ಬೆರೆಸಬೇಡಿ: ಕರೊನಾ ಕುರಿತು ಜನ ಜಾಗೃತಿ ಮೂಡಿಸುವಲ್ಲಿ ನಾವು ಮುಂದಿದ್ದೇವೆ. ಬೆಂಗಳೂರಿನಲ್ಲಿ ಕರೊನಾ ನಿಯಂತ್ರಣ ಕುರಿತು ಸಿಎಂ ಸಭೆ ನಡೆಸಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ. ಎಲ್ಲರ ಸಹಕಾರವನ್ನೂ ಸಿಎಂ ಕೋರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡದೆ ಕರೊನಾ ನಿಯಂತ್ರಣಕ್ಕೆ ಎಲ್ಲ ಪಕ್ಷದವರೂ ಮುಂದಾಗಬೇಕು ಎಂದರು.