ನವದೆಹಲಿ: ಶನಿವಾರ ಆರಂಭವಾದ ಜಿ-20 ಶೃಂಗಸಭೆಯು ಎರಡನೇ ಹಾಗೂ ಅಂತಿಮ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಳಗ್ಗೆ ಶೃಂಗಸಭೆ ಆರಂಭಕ್ಕೂ ಮುನ್ನ ಜಿ20 ನಾಯಕರು ರಾಜ್ಘಾಟ್ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದ ನಾಯಕರಿಗೆ ಪ್ರಧಾನಿ ಮೋದಿ ಅವರು ಖಾದಿಯನ್ನು ಉಡುಗೊರೆ ನೀಡಿ ಸ್ವಾಗತಿಸಿದರು. ಸ್ಮಾರಕದ ಮುಂದೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ನಾಯಕರು ಲೀಡರ್ಸ್ ಲಾಂಜ್‌ನಲ್ಲಿ ಶಾಂತಿ ಗೋಡೆಗೆ ಸಹಿ ಹಾಕಿದರು.
ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಯುನೈಟೆಡ್ ಕಿಂಗ್ಡಮ್ ಪ್ರಧಾನಿ ರಿಷಿ ಸುನಕ್, ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಹಾಗೂ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೇರಿದಂತೆ ವಿಶ್ವದ ನಾಯಕರು ರಾಜ್ಘಾಟ್ನಲ್ಲಿ ಗಾಂಧಿ ಸ್ಮಾರಕಕ್ಕೆ ಹೂವಿನ ಹಾರವಿಟ್ಟು ಗೌರವ ಸಲ್ಲಿಸಿದರು.
ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯು ಭಾರತದ ಪಾಲಿಗೆ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜಪಾನ್, ಜರ್ಮನಿ, ಇಟಲಿ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಐರೋಪ್ಯ ಒಕ್ಕೂಟ, ಬ್ರೆಜಿಲ್ ಮತ್ತು ನೈಜೀರಿಯಾ ಸೇರಿದಂತೆ ವಿಶ್ವದ ನಾಯಕರು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಎಲ್ಲ ಗಣ್ಯರಿಗೆ ಸ್ವತಃ ಪ್ರಧಾನಿ ಮೋದಿ ಅವರು ಕೆಂಪು ಹಾಸಿನ ಸ್ವಾಗತ ಕೋರಿದರು.
ಈ ಸಭೆ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕನ್ವೆನ್ಷನ್ ಸೆಂಟರ್‌ನ ಭಾರತ ಮಂಟಪಂನಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹವಾಮಾನ ಬದಲಾವಣೆ, ಸಾಲ, ಆಹಾರ ಭದ್ರತೆ, ಸುಸ್ಥಿರತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷದ ಬಗ್ಗೆ ಚರ್ಚೆಗಳಾಗಲಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಥೀಮ್ನೊಂದಿಗೆ ಭಾರತ ಶೃಂಗಸಭೆಯನ್ನು ಆಯೋಜಿಸಿದೆ. (ಏಜೆನ್ಸೀಸ್)