ಸಾಮಾಜಿಕ ಕ್ರಾಂತಿ, ವಿಜ್ಞಾನ-ತಂತ್ರಜ್ಞಾನ, ಹೊಸ ಅಲೆಯ ತಂತ್ರಜ್ಞಾನದ ಉತ್ಕ್ರಾಂತಿಯವರೆಗೆ ಕರ್ನಾಟಕದ ಕಾಯ್ದೆಗಳು, ನೀತಿ-ನಿರ್ಧಾರಗಳು ದಿಟ್ಟಹೆಜ್ಜೆಗಳನ್ನು ಮೂಡಿಸಿವೆ. ದೇಶದ ಅನ್ಯ ರಾಜ್ಯಗಳಿಗೆ ಮೇಲ್ಪಂಕ್ತಿಯೂ ಆಗಿವೆ.
ಡಿ.ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆಯ ಜಾರಿ ಮುಖೇನ ಉಳುವವನೇ ಭೂಮಿ ಒಡೆಯನನ್ನಾಗಿಸಿದರು. ಇತರ ಹಿಂದುಳಿದ ವರ್ಗಗಳಲ್ಲೂ ವಂಚಿತರಿಗೆ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಮೀಸಲು ವ್ಯವಸ್ಥೆ ಕಲ್ಪಿಸಿದರು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ದೇಶದಲ್ಲೇ ಮೊದಲು ರಚನೆಯಾಗಿ, ಆಯೋಗದ ಕಾರ್ಯಚಟುವಟಿಕೆಗಳು ಕಾಲೋಚಿತಗೊಳ್ಳುತ್ತಲೇ ಇವೆ. ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿದ ಕ್ರಾಂತಿಕಾರಕ ತೀರ್ಮಾನ ಅರಸು ಅವರ ಇಚ್ಛಾಶಕ್ತಿಗೆ ಸಾಕ್ಷಿ.
ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರಾಗಿ ಅಬ್ದುಲ್ ನಜೀರ್ ಸಾಬ್ ಜೋಡಿಯು ‘ಜನತೆಯ ಕೈಗೆ ಅಧಿಕಾರ’ ಪರಿಕಲ್ಪನೆಯಡಿ ಅಧಿಕಾರ ವಿಕೇಂದ್ರೀಕರಿಸಿದರು. ಜಿಲ್ಲಾ ಪರಿಷತ್, ಮಂಡಲ ಪಂಚಾಯತ್ ಎಂಬ 2 ಹಂತದ ವ್ಯವಸ್ಥೆಗಳು ಅಧಿಕಾರದ ದೃಷ್ಟಿಯಿಂದ ಬಲಿಷ್ಠವಾಗಿದ್ದವು.
ರಾಮಕೃಷ್ಣ ಹೆಗಡೆ ಕಾಲದಲ್ಲಿ ‘ತಾಳಿ ಭಾಗ್ಯ’ ಯೋಜನೆಯಡಿ ಬಡ ಕುಟುಂಬಗಳಿಗೆ ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ, ಶಾಲೆಗಳಿಗೆ ಮಕ್ಕಳ ಹಾಜರಾತಿ ಹೆಚ್ಚಿಸಲು ಎಸ್.ಬಂಗಾರಪ್ಪ ಕೊಡುತ್ತಿದ್ದ ಒಂದು ರೂಪಾಯಿ, ಎಸ್.ಎಂ.ಕೃಷ್ಣ ಕಾಲದಲ್ಲಿ ಮಧ್ಯಾಹ್ನದ ಬಿಸಿಯೂಟ, ಮಹಿಳೆಯರ ಸಬಲೀಕರಣಕ್ಕೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸ್ಥಾಪನೆ, ಬಿ.ಎಸ್.ಯಡಿಯೂರಪ್ಪ ಆಡಳಿತದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ, ಪ್ರೌಢಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ, ಸಿದ್ದರಾಮಯ್ಯ ಆಡಳಿತದಲ್ಲಿ ಅನ್ನಭಾಗ್ಯ ಯೋಜನೆ, 5 ರೂಪಾಯಿಗೆ ಉಪಾಹಾರ, 10 ರೂಪಾಯಿಗೆ ಊಟ ಒದಗಿಸುವ 175 ‘ಇಂದಿರಾ ಕ್ಯಾಂಟೀನ್’, 2ನೇ ಅವಧಿಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಮತ್ತು ಅನ್ನಭಾಗ್ಯವೆಂಬ ಪಂಚ ಗ್ಯಾರಂಟಿ ಯೋಜನೆಗಳು ಗಮನಸೆಳೆದಿವೆ.
ಜಾಗತಿಕ ನಕ್ಷೆಯಲ್ಲಿ ಭಾರತದ ಸಿಲಿಕಾನ್ ಸಿಟಿ, ಐಟಿ ಹಬ್ ಆಗಿ ಬೆಂಗಳೂರು ಹೊರ ಹೊಮ್ಮುವುದಕ್ಕೆ ಮೂಲ ಕಾರಣೀಕರ್ತೃ ದೇವರಾಜ ಅರಸು. ಎಲೆಕ್ಟ್ರಾನಿಕ್ ಸಿಟಿಗೆ ಜಮೀನು ಮಂಜೂರು ಮಾಡಿದರೆ, ಜೆ.ಎಚ್.ಪಟೇಲ್ರು ಬೆಳವಣಿಗೆಗೆ ಅಗತ್ಯ ಆರ್ಥಿಕ ನೆರವು ನೀಡಿದರು. ಎಸ್.ಎಂ.ಕೃಷ್ಣ ಅವಧಿಯಲ್ಲಿ ಬ್ರಾ್ಯಂಡಿಂಗ್ ಆಯಿತು. ಶಾಖೋತ್ಪನ್ನ ವಿದ್ಯುತ್ ಘಟಕಗಳ ಸಂಖ್ಯೆ ಹೆಚ್ಚಿಸಿ ಇಂಧನ ಸ್ವಾವಲಂಬನೆಯತ್ತ ಹೆಜ್ಜೆ, ಆಲಮಟ್ಟಿ ಅಣೆಕಟ್ಟೆ ನಿರ್ವಣಕ್ಕೆ ವೇಗ ನೀಡಿದ್ದು ಜೆ.ಎಚ್.ಪಟೇಲ್ರ ಮತ್ತೆರಡು ಮಹತ್ ಸಾಧನೆಗಳು.
ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ, ಅದಕ್ಕೆ ಕಾನೂನು ರಕ್ಷಣೆ ನೀಡಿದ ಹೆಗ್ಗಳಿಕೆ ಕರ್ನಾಟಕದ್ದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮೊದಲ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆ (ಎಸ್ಸಿಎಸ್ಪಿ-ಟಿಎಸ್ಪಿ) ಕಾಯ್ದೆ ಜಾರಿಗೊಳಿಸಿ, ಸಾಮಾಜಿಕ ನ್ಯಾಯದ ಬದ್ಧತೆಗೆ ಹೊಸ ಆಯಾಮ ನೀಡಿದರು.
ಎಂ.ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ), ಸರ್ಕಾರಿ ಕೋಟಾ, ಖಾಸಗಿ, ಎನ್ಆರ್ಐ ಕೋಟಾ, ಶುಲ್ಕ ನಿಗದಿಯು ಭಾರಿ ಸುಧಾರಣೆಗೆ ಕಾರಣವಾಗಿ ವೃತ್ತಿಪರ ವ್ಯಾಸಂಗ ಕೈಗೆಟುಕುವ ದ್ರಾಕ್ಷಿಯಾಯಿತು. ಅಚ್ಚಕನ್ನಡತನ, ನೆಲದ ಸಂಸ್ಕೃತಿ-ಪರಂಪರೆ ಬಿಂಬಿಸುವ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ತೆರೆದ ಶ್ರೇಯಸ್ಸು ಮೊಯ್ಲಿಯವರಿಗೆ ಸಲ್ಲುತ್ತದೆ.
ಹಲವು ಮೊದಲುಗಳು: ಬಾಗಲಕೋಟೆ ಜಿಲ್ಲೆಯ ರಾಮತ್ನಾಳ- ಮರೋಳ ಹನಿ ನೀರಾವರಿ ಯೋಜನೆಯು ಏಷ್ಯಾದಲ್ಲೇ ಅತಿದೊಡ್ಡದು. 381.50 ಕೋಟಿ ರೂ. ವೆಚ್ಚದಲ್ಲಿ ನಿರ್ವಣ, 2,150 ಕಿ.ಮೀ. ಕೊಳವೆ ಜಾಲ ಹೊಂದಿದೆ. ತಿಡಗುಂಡಿ ಶಾಖಾ ಕಾಲುವೆಯಡಿ 16 ಕಿ.ಮೀ. ಉದ್ದದ ಸೇತುಗಾಲುವೆ ಏಷ್ಯಾದಲ್ಲೇ ಅತಿ ಉದ್ದನೆಯದಾಗಿದ್ದು, ಈ ಕಾಲುವೆಯು 63,190 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆಗಾಗಿ ಮೊಬೈಲ್ ಆಪ್ಗಳಲ್ಲಿ ಸೇವೆ, ಮಹಿಳಾ ಉದ್ಯಮಶೀಲತೆಗೆ ಪ್ರೋತ್ಸಾಹ, ನೀರು ಸಂರಕ್ಷಣೆಗೆ ಹೊಸ ಆವಿಷ್ಕಾರಗಳ ಬಳಕೆ, ಉನ್ನತ ಶಿಕ್ಷಣದಲ್ಲಿ ಐಎಎಸ್ಸಿ, ಐಐಎಂ ಹೀಗೆ ಹಲವು ಮೊದಲುಗಳ ಪಟ್ಟಿ ದೀರ್ಘ.