ಪ್ರಯಾಗ್ರಾಜ್: ಜನವರಿ 13ರಿಂದ ಅರಂಭವಾಗಿರುವ ಮಹಾಕುಂಭಮೇಳಕ್ಕೆ (Maha Kumbh Mela) ಪ್ರತಿನಿತ್ಯ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಿದ್ದು, ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್, ನಟ-ರಾಜಕಾರಣಿ ಕೃಷ್ಣ ಕುಮಾರ್, ಟಿವಿ ನಟ ಸಿದ್ಧಾರ್ಥ್ ನಿಗಮ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದ್ದಾರೆ.
ಇದೀಗ ಮಹಾಕುಂಭಮೇಳಕ್ಕೆ (Maha Kumbh Mela) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ, ಇಟಾಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಎಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೊಂದು ಎಐ ಜೆನರೇಟೆಡ್ ವಿಡಿಯೋ ಆಗಿದ್ದು, ಪ್ರಧಾನಿ ಮೋದಿ, ಎಲಾನ್ ಮಸ್ಕ್, ಜಾರ್ಜಿಯಾ ಮೆಲೋನಿ, ಡೊನಾಲ್ಡ್ ಟ್ರಂಪ್, ರಿಷಿ ಸುನಕ್, ಜಸ್ಟಿನ್ ಟ್ರುಡೊ, ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೋನೆಲ್ ಮೆಸ್ಸಿ, ವಿಲ್ ಸ್ಮಿತ್, ಝೆಂಡಾಯಾ, ಟಾಮ್ ಹಾಲೆಂಡ್ ಮತ್ತು ಜಾನ್ ಸೆನಾ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಹಾಗೂ ಉದ್ಯಮಿಗಳು ಪ್ರಯಾಗ್ರಾಜ್ನಲ್ಲಿ ಪುಣ್ಯಸ್ನಾನ ಮಾಡುತ್ತಿರುವುದನ್ನು ನೋಡಬಹುದಾಗಿದೆ.
Artificial Budhi ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 7.2 ಮಿಲಿಯನ್ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಹಲವರು ತಂತ್ರಜ್ಞಾನದ ಬಳಕೆಯನ್ನು ಹಾಡಿ ಹೊಗಳಿದ್ದು, ಕಮೆಂಟ್ ಸೆಕ್ಷನ್ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಪ್ರಯಾಗ್ರಾಜ್ನಲ್ಲಿ ಜನವರಿ 13ರಿಂದ ಆರಂಭವಾಗಿರುವ ಮಹಾಕುಂಭಮೇಳವು (Maha Kumbh Mela) ಜನವರಿ 25ರಂದು ಸಂಪನ್ನಗೊಳ್ಳಲಿದೆ.