ಹೈದರಾಬಾದ್: ಕಿವಿ ಕೇಳದ, ಮಾತೂ ಬಾರದ ಇಬ್ಬರು ಸ್ನೇಹಿತರು ತಮಗೆ ತಾವೇ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ನ ನಾಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಮ್ಮ ಸೆಲ್ಫಿ ವಿಡಿಯೋವನ್ನು ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಕಳಿಸಿದ್ದಾರೆ.
ಶೇಖ್ ಮಸ್ತಾನ್ವಾಲಿ ಮತ್ತು ಎನ್. ಅಶ್ವಿನಿ ಎಂಬುವರು ಮೃತರು. ಇಬ್ಬರೂ ಹೈದರಾಬಾದ್ನ ಲಾಜಿಸ್ಟಿಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಾಗೇ ಇಬ್ಬರೂ ಕಿವುಡು ಮತ್ತು ಮೂಕರಾಗಿದ್ದರು.
ಮಸ್ತಾನ್ವಾಲಿ ಮತ್ತು ಅಶ್ವನಿ ಇವರಿಬ್ಬರೂ ಮೆಹ್ದಿಪಟ್ನಂನಲ್ಲಿ ಪ್ರತ್ಯೇಕ ರೂಂಗಳಲ್ಲಿ ವಾಸವಾಗಿದ್ದರು. ಸೋಮವಾರದಿಂದಲೇ ನಾಪತ್ತೆಯಾಗಿದ್ದರು. ಅಶ್ವಿನಿ ಕುಟುಂಬದವರು ಹ್ಯೂಮಾಯೂನ್ ನಗರದ ಠಾಣೆಯಲ್ಲಿ ದೂರು ನೀಡಿದ್ದರು. ಅಶ್ವನಿ ಕಾಣೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆಕೆಯ ಸಹೋದ್ಯೋಗಿಯೂ ನಾಪತ್ತೆಯಾಗಿರುವ ವಿಷಯ ಗೊತ್ತಾಯಿತು. ಹಾಗೇ ಇವರಿಬ್ಬರ ಮೊಬೈಲ್ಗಳೂ ಕೂಡ ಸ್ವಿಚ್ ಆಫ್ ಆಗಿದ್ದವು. ಇದನ್ನೂ ಓದಿ: ಮಕ್ಕಳ ಎದುರೇ ಮಹಿಳೆಯನ್ನು ರೇಪ್ ಮಾಡಿದ ದುರುಳರು; ಅವಳ್ಯಾಕೆ ಹೋಗಬೇಕಿತ್ತು ಎಂದ ಪೊಲೀಸ್ ಮುಖ್ಯಸ್ಥ
ಮಾತು ಬಾರದ ಇವರು ತಮ್ಮ ಕೈಸನ್ನೆ ಭಾಷೆಯಲ್ಲಿಯೇ ವಿಡಿಯೋ ಮಾಡಿ, ಸ್ನೇಹಿತರಿಗೆ ವಿಡಿಯೋ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸ್ನೇಹಿತರೂ ಕೂಡ ಕಿವುಡು ಮತ್ತು ಮೂಕರೇ ಆಗಿದ್ದಾರೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ. ವೈಯಕ್ತಿಕ ಕಾರಣಗಳಿಂದ ಸಾಯುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಹಾಗೇ ತಾವು ಇದ್ದ ಸ್ಥಳದ ಲೊಕೇಶನ್ ಕೂಡ ಆತ್ಮಹತ್ಯೆ ಮಾಡಿಕೊಂಡ ದಿನವೇ ಶೇರ್ ಮಾಡಿದ್ದಾರೆ.
ಆದರೆ ಸ್ಥಳಕ್ಕೆ ಹೋಗುವಷ್ಟರಲ್ಲಿ ಅವರಿಬ್ಬರ ದೇಹಗಳೂ ಸುಟ್ಟು ಕರಕಲಾಗಿದ್ದವು. ಅವುಗಳ ಸಮೀಪ ಪೆಟ್ರೋಲ್ ಬಾಟಲಿಗಳೂ ಇದ್ದವು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್)