ಉಚಿತ ಬಸ್​ ಪ್ರಯಾಣದಿಂದ ಉಂಟಾದ ನೂಕುನುಗ್ಗಲಿನಿಂದಾಗಿ ನಿನ್ನೆ ಕೊಳ್ಳೆಗಾಲ ಬಸ್​ ನಿಲ್ದಾಣದಲ್ಲಿ ಬಸ್​ ಡೋರ್ ಕಿತ್ತು ಹೋಗಿತ್ತು. 
ನ್ಯೂಸ್

ಉಚಿತ ಪ್ರಯಾಣ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಹೋಗಬೇಕೋ ಬೇಗ ಹೋಗಿ ಬನ್ನಿ: ಹೀಗಂದಿದ್ಯಾರು, ಯಾಕೆ?

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದು, ಈಗಾಗಲೇ ಕೆಲವೆಡೆ ಅವಾಂತರಗಳು ಆಗಿಹೋಗಿವೆ.

ಇವೆಲ್ಲದರ ನಡುವೆಯೇ 'ಉಚಿತ ಪ್ರಯಾಣ ಅವಕಾಶ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಟೂರ್ ಹೋಗಬೇಕೋ ಬೇಗ ಹೋಗಿ ಬನ್ನಿ' ಎಂಬ ಹೇಳಿಕೆಯೊಂದು ಹೊರಬಿದ್ದಿದೆ. ಮಾಜಿ ಸಚಿವ ಆರ್.ಅಶೋಕ್ ಹೀಗೊಂದು ಹೇಳಿಕೆ ನೀಡುವ ಮೂಲಕ ಆಡಳಿತಾರೂಢ ಕಾಂಗ್ರೆಸ್​ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಬಸ್​ನಲ್ಲಿ ಉಚಿತ ಪ್ರಯಾಣ ಅವಕಾಶ ಹೆಚ್ಚು ದಿನ ಇರುವುದಿಲ್ಲ. ಎಲ್ಲೆಲ್ಲಿಗೆ ಟೂರ್ ಹೋಗಬೇಕೋ ಬೇಗ ಹೋಗಿಬನ್ನಿ. ಈ ಯೋಜನೆಯನ್ನು ಬೇಗ ಬಳಸಿಕೊಳ್ಳಿ, ಆಮೇಲೆ ನಿಮಗೆ ಅವಕಾಶ ಸಿಗುವುದಿಲ್ಲ. ಖಜಾನೆ ಖಾಲಿಯಾಗುತ್ತಿದೆ, ಇನ್ನೊಂದು ವರ್ಷದಲ್ಲಿ ರಾಜ್ಯ ದಿವಾಳಿಯಾಗುತ್ತದೆ. ಆಗ ಎಲ್ಲ ಯೋಜನೆಗಳನ್ನು ಹಿಂದಕ್ಕೆ ಪಡೆಯುತ್ತಾರೆ. ಬೇಗ ನಿಮ್ಮ ಎಲ್ಲ ಹರಕೆಗಳನ್ನು ತೀರಿಸಿಕೊಳ್ಳಿ ಎಂದು ಅವರು ರಾಜ್ಯದ ಮಹಿಳೆಯರನ್ನು ಉದ್ದೇಶಿಸಿ ಹೇಳಿದ್ದಾರೆ.