ಗದಗದಲ್ಲಿ ಕಿಟಕಿ ಮೂಲಕ ಬಸ್​ಗೆ ಹತ್ತಿದ ಪ್ರಯಾಣಿಕ 
ನ್ಯೂಸ್

ಮಹಿಳೆಯರಿಗೆ ಉಚಿತ ಪ್ರಯಾಣದ 'ಶಕ್ತಿ'; ಪುರುಷರಿಗೆ ಪರದಾಟ!

ಗದಗ: ಕಾಂಗ್ರೆಸ್​ನ ಐದು ಗ್ಯಾರಂಟಿಗಳ ಪೈಕಿ ಮೊದಲನೆಯದಾಗಿ ಜಾರಿಗೆ ಬಂದಿರುವ, ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ 'ಶಕ್ತಿ' ಯೋಜನೆ ಇದೀಗ ರಾಜ್ಯಾದ್ಯಂತ ನಕಾರಾತ್ಮಕ ಸಂಗತಿಗಳಿಂದಾಗಿಯೂ ಭಾರಿ ಸುದ್ದಿಯಲ್ಲಿದೆ.

ಉಚಿತ ಪ್ರಯಾಣದ ಅವಕಾಶದಿಂದ ಬಸ್​ಗಳಲ್ಲಿ ವಿಪರೀತ ನೂಕುನುಗ್ಗಲು ಸೃಷ್ಟಿಯಾಗಿ ಬಸ್​ ಡೋರ್​ ಕಿತ್ತುಹೋಗಿದ್ದ ಪ್ರಕರಣ ನಡೆದಿದ್ದರೆ, ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಬಂದಿದ್ದ ಮಹಿಳೆಯರು ಬಸ್​ನಲ್ಲೇ ಹೊಡೆದಾಟ ನಡೆಸಿದ ವಿಡಿಯೋ ಕೂಡ ಇಂದು ವೈರಲ್ ಆಗಿದೆ.

ಮಹಿಳೆಯರೇ ಬಸ್​ನಲ್ಲಿ ತುಂಬಿಕೊಳ್ಳಲಾರಂಭಿಸಿದ್ದರಿಂದ ಶಾಲಾ ಮಕ್ಕಳ ಪ್ರಯಾಣಕ್ಕೂ ಅಡ್ಡಿಯಾದ ಪ್ರಕರಣಗಳು ವರದಿಯಾಗಿವೆ. ಮಹಿಳೆಯರ ಉಚಿತ ಪ್ರಯಾಣದ ಬಸ್​ಗಳಲ್ಲಿ ಪುರುಷರಿಗೆ ಶೇ.50 ಆಸನಗಳ ಮೀಸಲು ಘೋಷಿಸಿದ್ದರೂ ಸುಲಭವಾಗಿ ಮೀಸಲು ಸೀಟು ಬಿಟ್ಟುಕೊಡದ ಮಹಿಳೆಯರಿಂದಾಗಿ ಪ್ರಯಾಣಿಕರ ನಡುವೆ ಬಸ್​ನಲ್ಲಿ ವಾಗ್ವಾದ ನಡೆಯುತ್ತಿದೆ. ‘ಪುರುಷರಿಗಾಗಿ’ ಎಂದು ನಿಗಮದವರು ಬರೆಸದ ಕಾರಣ ಸೀಟು ಬಿಟ್ಟು ಕೊಡಿ ಎಂದು ಕೇಳಲು ಪುರುಷರಿಗೆ ಕಷ್ಟವಾಗುತ್ತಿದೆ. ಕೇಳಿದರೆ ‘ಪುರುಷರಿಗಾಗಿ’ ಅಂತ ಎಲ್ಲಿದೆ ಎಂಬ ಪ್ರಶ್ನೆಯೂ ಎದುರಾಗುತ್ತಿದೆ.

ಇವೆಲ್ಲದರ ಜತೆಗೆ ಈಗ ಪುರುಷ ಪ್ರಯಾಣಿಕರಿಗೆ ಬಸ್​ಗೆ ಹತ್ತುವುದು ಕೂಡ ಕಷ್ಟವಾಗಿ ಪರಿಣಮಿಸಿದೆ. ಬಸ್​ ಬರುತ್ತಿದ್ದಂತೆ ಮಹಿಳೆಯರು ಡೋರ್ ಬಳಿ ಮುಗಿಬೀಳುವುದರಿಂದ ಪುರುಷರು ಬಸ್​ಗೆ ಪ್ರವೇಶಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಇಂದು ಗದಗದಲ್ಲಿ ಪುರುಷ ಪ್ರಯಾಣಿಕರು ಕಿಟಕಿ ಮೂಲಕ ಬಸ್​ಗೆ ಪ್ರವೇಶಿಸಬೇಕಾದ ಸನ್ನಿವೇಶ ಎದುರಾಗಿತ್ತು. ಡೋರ್ ಬಳಿ ಜಮಾಯಿಸಿದ ಮಹಿಳೆಯರನ್ನು ತಳ್ಳಿಕೊಂಡು ಒಳಹೋಗುವುದು ಇನ್ನೊಂದು ರೀತಿಯ ಸಮಸ್ಯೆಗೆ ಆಸ್ಪದ ನೀಡುವ ಸಾಧ್ಯತೆ ಇರುವುದರಿಂದ ಪುರುಷರು ಹೀಗೆ ಕಿಟಕಿ ಮೂಲಕ ಹತ್ತಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಕೆಲ ಪ್ರಯಾಣಿಕರು ಅಲವತ್ತುಕೊಂಡಿದ್ದಾರೆ.