ನ್ಯೂಸ್

ವಂಶಿಕಾ ಹೆಸರಲ್ಲಿ ವಂಚನೆ ಪ್ರಕರಣ: ಬೆಳಕಿಗೆ ಬರುತ್ತಿದೆ ನಿಶಾ ನರಸಪ್ಪಳ ಒಂದೊಂದೆ ಮೋಸ

ಬೆಂಗಳೂರು: ಮಾಸ್ಟರ್​ ಆನಂದ್​ ಪುತ್ರಿ ಹಾಗೂ ಬಾಲ ನಟಿ ವಂಶಿಕಾ ಹೆಸರು ಬಳಸಿ ವಂಚನೆ ಎಸಗಿರುವ ಸಂಬಂಧ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ರಾಮನಗರದ ಮೂಲದ ಆರೋಪಿ ನಿಶಾ ನರಸಪ್ಪಳ ಒಂದೊಂದೆ ವಂಚನೆ ಪ್ರಕರಣ ಇದೀಗ ಬೆಳಕಿಗೆ ಬರುತ್ತಿದೆ.

ನಿಶಾ ವಿರುದ್ಧ ಪ್ರಕರಣ ದಾಖಲಾಗಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಪ್ರಕರಣ ದಾಖಲಾಗಿವೆ. ಇದೀಗ ವಂಶಿಕಾ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಿಶಾಳ ಒಂದೊಂದೆ ವಂಚನೆಗಳು ಬಟಾಬಯಲಾಗುತ್ತಿವೆ. ಕಳೆದ ತಿಂಗಳು ದಾಖಲಾದ ದೂರುಗಳ ಬೆನ್ನಲ್ಲೇ ಇದೀಗ ಸಾಕಷ್ಟು ಮಂದಿಯಿಂದ ನಿಶಾ ವಿರುದ್ಧ ದೂರಿನ ಸರಮಾಲೆಗಳು ಹರಿದು ಬರುತ್ತಿವೆ.

ಹಲವು ವಂಚನೆ ದೂರುಗಳು ಬೆಳಕಿಗೆ

ತಾರಾ ಎಂಬುವರಿಗೆ ಇಪ್ಪತ್ತು ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪ ಇದೀಗ ಕೇಳಿಬಂದಿದೆ. ಈವೆಂಟ್ ಮ್ಯಾನೇಜ್​ಮೆಂಟ್​ ಹೆಸರಲ್ಲಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ರೀತಿ ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲಿಯೂ ವಂಚನೆ ದೂರುಗಳು ದಾಖಲಾಗಿವೆ.

ಲಾಭಾಂಶ ನೀಡುವುದಾಗಿ ವಂಚನೆ

ಸದಾಶಿವನಗರ ಠಾಣೆಯಲ್ಲಿ ದಾಖಲಾದ ಕೇಸ್​ನಲ್ಲಿ ಬರೋಬ್ಬರಿ 35 ಲಕ್ಷ ರೂ. ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಸಾಲದ ರೂಪದಲ್ಲಿ ಬಂಡವಾಳ ಹೂಡಿದರೆ ಲಾಭಾಂಶ ನೀಡುವುದಾಗಿ ವಂಚಿಸಿದ್ದಾಳೆ. ಮೊದ ಮೊದಲು ಲಾಭಾಂಶದ ಹಣ ಕೊಟ್ಟು ನಂಬಿಸಿ, ಆ ಬಳಿಕ ಎರಡರಷ್ಟು ಹಣ ಪಡೆದು ವಂಚನೆ ಮಾಡಿದ್ದಾಳೆ.

ರೆಸಾರ್ಟ್​ಗಳಲ್ಲಿ ಶೂಟಿಂಗ್​

ನಿಶಾ, ಬೆಂಗಳೂರಿನ ದೊಡ್ಡ ಮಾಲ್​​ಗಳಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದಳು. ಬೆಂಗಳೂರು ಮಾತ್ರವಲ್ಲದೆ, ನಗರದ ಹೊರಹೊಲಯದಲ್ಲಿನ ರೆಸಾರ್ಟ್​ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಳು. ಕೇವಲ ಮಕ್ಕಳಷ್ಟೇ ಅಲ್ಲ ಸಾಕಷ್ಟು ಮಂದಿಗೆ ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾಳೆ.

ಹೈಕೋರ್ಟ್​ನಲ್ಲೂ ಕೇಸ್​

ಸದ್ಯ ಸದಾಶಿವನಗರ ಠಾಣೆಗೆ ಬರುತ್ತಿರುವ ದೂರುಗಳನ್ನು ತಮ್ಮ ಮನೆ ವ್ಯಾಪ್ತಿಯ ಠಾಣೆಯಲ್ಲಿ ನೀಡಲು ಸೂಚನೆ ನೀಡಲಾಗಿದೆ. ಹೈಕೋರ್ಟ್​ನಲ್ಲೂ ಓರ್ವ ಮಹಿಳೆ ಕೇಸ್ ಹಾಕಿದ್ದು, ವಿಚಾರಣೆಯ ಹಂತದಲ್ಲಿದೆ. ಲಕ್ಷಾಂತರ ರೂ. ಹಣದಲ್ಲಿ ಲಕ್ಸುರಿ ಲೈಫ್ ಲೀಡ್ ಮಾಡ್ತಿದ್ದ ನಿಶಾ ನರಸಪ್ಪ, ಇದೀಗ ವಂಶಿಕಾ ಪ್ರಕರಣದಲ್ಲಿ ತಗ್ಲಾಕ್ಕೊಂಡಿದ್ದಾಳೆ. ಆಕೆಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. (ದಿಗ್ವಿಜಯ ನ್ಯೂಸ್​)