supreme court 
ನ್ಯೂಸ್

ರಾಜಧಾನಿಯಲ್ಲಿ ಗಿಡಮರ ಬೆಳೆಸಲು ಯೋಜನೆ ರೂಪಿಸಿ ಎಂದ ಸುಪ್ರೀಂ; ಸೆಂಟ್ರಲ್​ ವಿಸ್ತಾ ಕಾಮಗಾರಿ ಕುರಿತು ಪ್ರಶ್ನೆ

ನವದೆಹಲಿ: ಸುಪ್ರೀಂ ಕೋರ್ಟ್​ನಲ್ಲಿ ಇಂದು ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಬಿಗಡಾಯಿಸಿರುವ ವಾಯು ಗುಣಮಟ್ಟದ ಬಗೆಗಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮತ್ತೊಂದು ವಿಚಾರಣೆ ನಡೆಯಿತು. ದೆಹಲಿಯಲ್ಲಿ ಮರಗಿಡಗಳನ್ನು ಬೆಳೆಸುವ ಸಮಗ್ರ ಯೋಜನೆ ನಿರ್ಮಿಸಲು ನಿರ್ದೇಶಿಸಿದ ನ್ಯಾಯಾಲಯ, ಕೇಂದ್ರ ಸರ್ಕಾರ ಕೈಗೊಂಡಿರುವ ಸೆಂಟ್ರಲ್​ ವಿಸ್ತಾ ಯೋಜನೆಯ ನಿರ್ಮಾಣ ಕಾಮಗಾರಿಯಲ್ಲಿ ಸೂಕ್ತ ಎಚ್ಚರಿಕೆ ವಹಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದೆ.

ದೆಹಲಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಲಾಗಿದ್ದರೂ ಸೆಂಟ್ರಲ್​ ವಿಸ್ತಾ ಯೋಜನೆಯ ಕಾಮಗಾರಿ ಮುಂದುವರಿಸಿರುವುದು ರಾಜಧಾನಿಯಲ್ಲಿ ಧೂಳು ಮತ್ತು ಮಾಲಿನ್ಯ ಹೆಚ್ಚಲು ಕಾರಣವಾಗಿದೆಯೇ ಎಂದು ಪರಿಶೀಲಿಸಬೇಕಿದೆ. ಯೋಜನೆಯಿಂದ ಉಂಟಾಗುವ ವಾಯು ಮಾಲಿನ್ಯವನ್ನು ನಿವಾರಿಸಲು ಏನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

ನಾಲ್ಕನೇ ಹಂತದ ಮೆಟ್ರೋ ವಿಸ್ತರಣೆ ಯೋಜನೆಗಾಗಿ ಮರಗಳನ್ನು ಕಡಿಯುವ ಮುನ್ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿಯನ್ನು ತೆಗೆದುಕೊಳ್ಳುವಂತೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ಕೋರ್ಟ್ ನಿರ್ದೇಶಿಸಿತು. ಜೊತೆಗೆ, 12 ವಾರಗಳೊಳಗೆ ದೆಹಲಿಯಲ್ಲಿ ಮರಗಳು ಮತ್ತು ಸಸಿಗಳನ್ನು ನೆಡಲು ಸಮಗ್ರ ಯೋಜನೆ ರೂಪಿಸಿ ಕೋರ್ಟ್​ ಮುಂದಿರಿಸುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿತು.

ದೆಹಲಿ ಎನ್​ಸಿಆರ್​ನಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ನೇಮಿಸಲಾಗಿರುವ ಆಯೋಗದ ನಿರ್ದೇಶನಗಳನ್ನು ಜಾರಿಗೊಳಿಸಲು ದೆಹಲಿ, ಪಂಜಾಬ್​, ಹರಿಯಾಣ ಮತ್ತು ಉತ್ತರಪ್ರದೇಶ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕಂಪ್ಲೈಯನ್ಸ್​ ರಿಪೋರ್ಟ್​ ಸಲ್ಲಿಸಲು ಸೂಚಿಸಿದ ನ್ಯಾಯಾಲಯ, ವಿಚಾರಣೆಯನ್ನು ಡಿಸೆಂಬರ್​ 2 ಕ್ಕೆ ಮುಂದೂಡಿತು. (ಏಜೆನ್ಸೀಸ್)