ನವದೆಹಲಿ: ಕೀಟ್ಸ್ನ ಮೊದಲ ಕವನ ಸಂಕಲನ ಪ್ರಕಟಗೊಂಡಾಗ ಆತನ ವಯಸ್ಸು 21. ಅಂತೆಯೇ ಮೇರಿ ಶೆಲ್ಲಿ ಬರವಣಿಗೆ ಆರಂಭಿಸಿದಾಗ ಆಕೆಯ ಪ್ರಾಯ 18 ವರ್ಷ. ಅಷ್ಟು ಕಡಿಮೆ ವಯಸ್ಸಿನಲ್ಲಿಯೇ ಎಂಥ ಸಾಧನೆ ಮಾಡಿದ್ದರು. ಆದರೆ, ಈ ಸಾಧನೆಗಳೆಲ್ಲ ಈತನ ಮುಂದೆ ನಿಜಕ್ಕೂ ಕುಬ್ಜವಾಗುತ್ತವೆ. ಏಕೆಂದರೆ ನಾಲ್ಕು ವರ್ಷದ ನದೀಮ್ ಶಮ್ಮಾ ಈಗಾಗಲೇ ಪುಸ್ತಕ ರಚನೆಗೆ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾನೆ.
ಬ್ರಿಟಿಷ್ ಮಕ್ಕಳ ಪುಸ್ತಕ ಪ್ರಕಾಸ ಸಂಸ್ಥೆ ವಾಕರ್ಸ್ ಬುಕ್ಸ್ ಕವನ ಸಂಕಲನ ರಚನೆಗಾಗಿ ನದೀಮ್ ಜತೆ ಒಪ್ಪಂದ ಮಾಡಿಕೊಂಡಿದೆ. ಇಂಥದ್ದೊಂದು ಶ್ರೇಯಕ್ಕೆ ಪಾತ್ರನಾದ ವಿಶ್ವದಲ್ಲಿಯೇ ಅತಿ ಚಿಕ್ಕ ವಯಸ್ಸಿನ ವ್ಯಕ್ತಿ ಈತನಾಗಿದ್ದಾನೆ.
ಇಂಗ್ಲೆಂಡ್ನ ಯುನಿವರ್ಸಿಟಿ ಆಫ್ ರೀಡಿಂಗ್ನಲ್ಲಿ ಸಾಹಿತ್ಯದ ಪ್ರಾಧ್ಯಾಪಕಿಯಾಗಿರುವ ಯಾಸ್ಮೀನ್ ಶಮ್ಮಾ ಈತನ ತಾಯಿ. ಇನ್ನೊಬ್ಬ ಪ್ರಾಧ್ಯಾಪಕಿ ಕೇಟ್ ಕ್ಲಾಂಚಿ ಈತನ ಪ್ರತಿಭೆ ಹೊರ ಬರಲು ಕಾರಣರಾದವರು. ಈತನ ಕವನಗಳನ್ನು ಸೋಷಿಯಲ್ ಮಿಡಿಯಾಗಳಲ್ಲಿ ಹಂಚಿಕೊಂಡು ಹೆಚ್ಚು ಜನಪ್ರಿಯವಾಗುವಂತೆ ಮಾಡಿದರು.
ಸ್ಥಳೀಯ ಸಂಡೇ ಟೈಮ್ಸ್ ಹಾಗೂ ಸ್ಕೈ ನ್ಯೂಸ್ಗಳಲ್ಲಿ ಈತನ ಬಗ್ಗೆ ವರದಿಗಳು ಪ್ರಕಟಗೊಂಡವು. ಇದೇ ಕಾರಣಕ್ಕಾಗಿ ಈತ ವಾಕರ್ಸ್ ಬುಕ್ಸ್ ಸಂಸ್ಥೆಯ ಗಮನ ಸೆಳೆದಿದ್ದಾನೆ. ಈತನ 'ಅಸ್ಟಾನಿಷಿಂಗ್ ' ಹೆಸರಿನ ಕವನ ಸಂಕಲನ ಪ್ರಕಟಿಸುತ್ತಿದೆ.
ತನ್ನ ಕವನಗಳೆಲ್ಲ ಪುಸ್ತಕದಲ್ಲಿ ಪ್ರಕಟವಾಗುತ್ತಿವೆ ಎಂಬ ಖುಷಿ ನದೀಮ್ದು. ನನಗೂ ಒಂದು ಪುಸ್ತಕ ಕೊಡ್ತೀರಾ ಎಂದು ಅಷ್ಟೇ ಮುದ್ದಾಗಿ, ಮುಗ್ಧವಾಗಿ ಕೇಳುತ್ತಾನೆ ನದೀಮ್.