ಪ್ರತಾಪ್ ಸಿಂಗ್, ಸೋನಾಲ್ ಪರಿಹಾರ್ ಮತ್ತು ಅವರ ಇಬ್ಬರು ಮಕ್ಕಳು. 
ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಹತ್ಯೆ

ನ್ಯೂಜೆರ್ಸಿ: ಅಮೆರಿಕದ ನ್ಯೂಜೆರ್ಸಿಯಲ್ಲಿ ಭಾರತೀಯ ಮೂಲದ ಕುಟುಂಬದ ನಾಲ್ವರು ದಾರುಣವಾಗಿ ಹತ್ಯೆಯಾಗಿದ್ದು ಮನೆಯಲ್ಲಿ ಶವಗಳು ಪತ್ತೆಯಾಗಿವೆ.

ತೇಜ್ ಪ್ರತಾಪ್ ಸಿಂಗ್(43), ಸೋನಾಲ್ ಪರಿಹಾರ್(42), ಅವರ 10 ವರ್ಷದ ಪುತ್ರ ಮತ್ತು 6 ವರ್ಷದ ಪುತ್ರಿ ಪ್ಲೇನ್ಸ್‌ಬರೋನಲ್ಲಿರುವ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಕುಟುಂಬ ಉತ್ತರ ಪ್ರದೇಶ ಮೂಲದ್ದಾಗಿದ್ದು, ದಂಪತಿ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗಿಗಳಾಗಿದ್ದರು ಎನ್ನಲಾಗಿದೆ.

ಕುಟುಂಬದ ಯಾರೊಬ್ಬರೂ ಮೊಬೈಲ್​ ಕರೆ ಸ್ವೀಕರಿಸದಿದ್ದರಿಂದ ಆತಂಕಗೊಂಡ ಅವರ ಸಂಬಂಧಿಕರು ಅಕ್ಟೋಬರ್ 4 ರ ಸಂಜೆ 911ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕರೆ ಸ್ವೀಕರಿಸಿದ್ದ ಪೊಲೀಸ್​ ಅಧಿಕಾರಿಗಳು ಮನೆಗೆ ತೆರಳಿ ಪರಿಶೀಲಿಸಿದಾಗ ಇಡೀ ಕುಟುಂಬವನ್ನು ಯಾರೋ ಕೊಲೆ ಮಾಡಿಹೋಗಿರುವುದು ಪತ್ತೆಯಾಗಿದೆ.

ಪ್ಲೇನ್ಸ್‌ಬೊರೊ ಪೊಲೀಸ್ ಇಲಾಖೆ ಮುಖ್ಯಸ್ಥ ಎಮಾನ್ ಬ್ಲಾಂಚಾರ್ಡ್ ಈ ಕುರಿತು ಹೇಳಿಕೆ ನೀಡಿದ್ದು, ಹತ್ಯೆ ಕುರಿತು ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು, ಮನೆ ಸುತ್ತಲಿನ ನಿವಾಸಿಗಳು ಸಿಸಿ ಕ್ಯಾಮೆರಾ ಮಾಹಿತಿ ಅಥವಾ ಇನ್ನಾವುದೇ ಮಾಹಿತಿ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಕೋರಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಮುಂದೆ ಕೊಲೆ ಸಂಬಂಧ ಇನ್ನೂ ಹೆಚ್ಚಿನ ಮಾಹಿತಿ ಸಿಗಬಹುದು ಎಂದು ಅವರು ತಿಳಿಸಿದ್ದಾರೆ.

"ಈ ಘಟನೆಯಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ. ಇಂತಹ ಘಟನೆಗಳು ನಡೆಯಬಾರದು. ನಾಗರಿಕ ಸಮಾಜಕ್ಕೆ ಇದೊಂದು ಕಪ್ಪುಚುಕ್ಕೆಯಾಗಿದೆ ಎಂದು ಆ ಭಾಗದ ಮೇಯರ್ ಪೀಟರ್ ಕ್ಯಾಂಟು ಹೇಳಿದ್ದಾರೆ.