ನ್ಯೂಸ್

ಮಾಜಿ ಸಿಎಂ ಶೆಟ್ಟರ್ ದಿಢೀರ್ ದೆಹಲಿಗೆ; ಬಿಟ್ ​ಕಾಯಿನ್ ಬಿಕ್ಕಟ್ಟಿನ ನಡುವೆಯೇ ವರಿಷ್ಠರಿಂದ ಬಂತು ಕರೆ..!

Webdesk - Ravikanth

ಬೆಂಗಳೂರು: ಬಿಟ್ ಕಾಯಿನ್ ಬಿಕ್ಕಟ್ಟು ದಿನೇ ದಿನೆ ಇಕ್ಕಟ್ಟಾಗಿ ಬಿಗಡಾಯಿಸುತ್ತಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಬಿಜೆಪಿ ಹೈಕಮಾಂಡ್ ದಿಢೀರ್ ದೆಹಲಿಗೆ ಕರೆಸಿಕೊಂಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಎಡೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ವರಿಷ್ಠರು ಶೆಟ್ಟರ್ ಅವರನ್ನು ಕರೆಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿದ್ದ ಶೆಟ್ಟರ್ ಅಲ್ಲಿಂದಲೇ ಶುಕ್ರವಾರ ಮಧ್ಯಾಹ್ನ ದೆಹಲಿಗೆ ತೆರಳಿದ್ದಾರೆ. ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ಮುಖಂಡರು ದಿನೇ ದಿನೆ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರು ನೇರವಾಗಿ ಮುಖ್ಯಮಂತ್ರಿ ವಿರುದ್ಧ ಆರೋಪ ಹೊರಿಸಿದ್ದಾರೆ. ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಸರ್ಕಾರದ ವಿರುದ್ಧ ಬರುತ್ತಿರುವ ಟೀಕೆಗಳಿಗೆ ಬಿಜೆಪಿ ಕಡೆಯಿಂದ ಪ್ರತಿಕ್ರಿಯೆಗಳು ಬರುತ್ತಿದ್ದರೂ ಸರ್ಕಾರವನ್ನು ಬಲವಾಗಿ ಸಮರ್ಥನೆ ಮಾಡುತ್ತಿಲ್ಲ. ಕೆಲವು ಮುಖಂಡರಂತೂ ಅನುಮಾನ ಬಲವಾಗುವ ರೀತಿಯಲ್ಲಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದು ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಪಕ್ಷದ ಹೈಕಮಾಂಡ್ ಬಿಟ್ ಕಾಯಿನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ರಾಜಕೀಯ ಬೆಳವಣಿಗೆಗಳಾದರೂ ನಡೆಯಬಹುದೆಂಬ ಚರ್ಚೆ ಬಿಜೆಪಿ ವಲಯದಲ್ಲಿಯೇ ದಟ್ಟವಾಗಿದೆ. ಬಿಜೆಪಿ ವರಿಷ್ಠರು ಶೆಟ್ಟರ್ ಅವರನ್ನು ಕರೆಸಿಕೊಂಡಿರುವುದು ಮಾತ್ರವಲ್ಲದೆ ಭಾನುವಾರದ ತನಕ ದೆಹಲಿಯಲ್ಲಿಯೇ ಇರಬೇಕೆಂದು ಸೂಚನೆ ನೀಡಿದ್ದಾರೆ. ಬಿಜೆಪಿ ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ ಶೆಟ್ಟರ್ ಅವರಿಂದ ಬಿಟ್ ಕಾಯಿನ್ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಇದರೊಂದಿಗೆ ಸರ್ಕಾರದ ಕಾರ್ಯವೈಖರಿಯ ಬಗ್ಗೆಯೂ ವಿವರ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಶೆಟ್ಟರ್ ಹೈಕಮಾಂಡ್ ಮುಖಂಡರೆಲ್ಲರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಶೆಟ್ಟರ್ ಆಪ್ತರು ಮಾತ್ರ ಖಾಸಗಿ ಕೆಲಸದ ಮೇಲೆ ದೆಹಲಿಗೆ ತೆರಳಿದ್ದಾರೆಂದು ಹೇಳುತ್ತಿದ್ದಾರೆ.

ತನಿಖೆಗೆ ಸ್ವತಂತ್ರ ಸಮಿತಿ ರಚನೆ?

‘ಬಿಟ್ ಕಾಯಿನ್ ಹಗರಣ’ ಸಂಬಂಧ ಪೊಲೀಸರ ತನಿಖೆ ಮೇಲೆ ವ್ಯಕ್ತವಾಗಿರುವ ಅನುಮಾನಗಳ ನಿವಾರಣೆಗಾಗಿ ಸ್ವತಂತ್ರ ವಿಚಾರಣಾ ಸಮಿತಿ ರಚಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೂ ಚರ್ಚೆ ನಡೆದಿದೆ. ಚಳಿಗಾಲದ ಅಧಿವೇಶನದ ಒಳಗೆ ಹಗರಣದ ವಿವಾದದಿಂದ ಹೊರಬರಬೇಕು. ಪ್ರತಿಪಕ್ಷದವರ ಆರೋಪಗಳ ಬಗ್ಗೆ ಸೂಕ್ತ ಮಾಹಿತಿ ಪಡೆಯಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಗೆ ಹಿರಿಯ ಐಪಿಎಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸಮಿತಿ ರಚಿಸುವ ಸಂಬಂಧ ಸಿಎಂ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆಂದು ತಿಳಿದುಬಂದಿದೆ. ಪ್ರಕರಣದ ಸಿಸಿಬಿ ತನಿಖೆ ಪೂರ್ಣಗೊಳಿಸಿ ಕೋರ್ಟ್​ಗೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಂಧನವಾಗಿ ವರ್ಷದ ಬಳಿಕ ಬಿಟ್ ಕಾಯಿನ್ ಪ್ರಕರಣ ರಾಜಕೀಯ ವಲಯದಲ್ಲಿ ವಿವಾದ ಸೃಷ್ಟಿಯಾಗಿದೆ. ಚಳಿಗಾಲದ ಅಧಿವೇಶನದಲ್ಲಿ ‘ಬಿಟ್ ಕಾಯಿನ್’ ಕೋಲಾಹಲ ಎಬ್ಬಿಸುವ ಸಾಧ್ಯತೆಗಳಿವೆ. ಹೀಗಾಗಿ ಸಿಸಿಬಿ ಪೊಲೀಸ್ ತನಿಖೆ ಮೇಲೆ ಮೂಡಿರುವ ಗುಮಾನಿಗಳ ನಿವಾರಣೆಗೆ ನಿವೃತ್ತ ಅಥವಾ ಹಾಲಿ ಹಿರಿಯ ಐಪಿಎಸ್ ಅಧಿಕಾರಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಾಂತ್ರಿಕ ತಜ್ಞರ ವಿಚಾರಣಾ ಸಮಿತಿ ರಚಿಸಿ ವರದಿ ಪಡೆಯಲು ಸರ್ಕಾರ ಯೋಚಿಸಿದೆ.

ಸವಾಲುಗಳೇನು?: ವಿಚಾರಣಾ ಸಮಿತಿ ರಚನೆಯಾದರೆ ಬಿಟ್ ಕಾಯಿನ್ ತನಿಖೆ ನಡೆಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಬಿಸಿ ತಟ್ಟಲಿದೆ. ಶ್ರೀಕೃಷ್ಣ ವಿರುದ್ಧ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ಸಮಿತಿ ವಿಚಾರಣೆಗೆ ಕರೆಯಬಹುದು. ಬಿಟ್ ಕಾಯಿನ್ ಹಗರಣದ ಬಗ್ಗೆ ವಿಚಾರಣಾ ಸಮಿತಿಗೆ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಬಹುದು. ವಿಚಾರಣಾ ಸಮಿತಿ ರಚನೆ ಕುರಿತು ಸಿಎಂ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.

ತನಿಖೆಗೆ ಒಪ್ಪದ ಸಿಐಡಿ: ಬಿಟ್ ಕಾಯಿನ್ ಹಗರಣ ಆರೋಪ-ಪ್ರತ್ಯಾರೋಪದ ನಡುವೆ ಎಚ್ಚೆತ್ತ ಡಿಜಿ-ಐಜಿಪಿ ಪ್ರವೀಣ್ ಸೂದ್, ಕಳೆದ ವಾರ ಹ್ಯಾಕರ್ ಶ್ರೀಕಿ ವಿರುದ್ಧ ತನಿಖೆ ನಡೆಸಿದ್ದ ಬೆಂಗಳೂರಿನ ಸಿಸಿಬಿ ಹಾಗೂ ಸಿಐಡಿ ಅಧಿಕಾರಿಗಳ ಸಭೆ ಕರೆದು ಪ್ರಕರಣದ ಮಾಹಿತಿ ಪಡೆದಿದ್ದರು. ಸಮಗ್ರ ತನಿಖೆಯನ್ನು ಸಿಐಡಿಗೆ ವಹಿಸಲು ಡಿಜಿಪಿ ಪ್ರವೀಣ್ ಸೂದ್ ಸಲಹೆ ನೀಡಿದರು. ಆದರೆ, ಸಿಐಡಿ ಹಿರಿಯ ಅಧಿಕಾರಿಗಳು, ಬಿಟ್ ಕಾಯಿನ್ ತನಿಖೆ ಉಸ್ತುವಾರಿ ಬೇಡ. ಸಾರ್ವಜನಿಕ ವಲಯದಲ್ಲಿ ಪ್ರಕರಣದ ಬಗ್ಗೆ ಶಂಕೆಗಳು ಮೂಡಿವೆ. ಈ ಹಂತದಲ್ಲಿ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸುವುದೇ ಉತ್ತಮ ಎಂಬ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗಿದೆ.