ಬಳ್ಳಾರಿ: ಕಾಡು ವ್ಯಾಪ್ತಿಯಲ್ಲಿ ಗೋಲ್ಡ್ ಡೈಮಂಡ್‌ಗಾಗಿ ಗುಹೆಯಲ್ಲಿ ಆಕ್ಸಿಜನ್, ಜನರೇಟರ್, ಅತ್ಯಾಧುನಿಕ ಸಾಧನ ಬಳಸಿ ಹುಡುಕಾಟ ನಡೆಸುತ್ತಿದ್ದ ಆಂಧ್ರಪ್ರದೇಶದ ಐವರು ನಿಧಿಗಳ್ಳರು ಇದೀಗ ಅರಣ್ಯಾಧಿಕಾರಿಗಳ ಬಲೆಗೆ ಸಿಕ್ಕಿಬಿದ್ದ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ನಾರಿಹಳ್ಳದಲ್ಲಿ ವರದಿಯಾಗಿದೆ.
ಗುಂಟೂರು ಮೂಲದ ಶ್ರೀನಿವಾಸ್(45), ಆಂಧ್ರದ ಆಕಾಶ್( 20), ಶ್ರೀನಿವಾಸ್, ವೆಂಕಟ್ ರಾವ್ ಹಾಗೂ ಗದಗ ಮೂಲದ ಭಗತ್ ದೊಡ್ಡಮನಿ (50) ಬಂಧನಕ್ಕೊಳಗಾದ ಆರೋಪಿಗಳು. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಎಂಟ್ರಿ ಕೊಡ್ತಿದ್ದಂತೆ ಎಸ್ಕೇಪ್ ಆದ ಇನ್ನುಳಿದ 06 ಖದೀಮರ ಬಂಧನಕ್ಕೆ ಇದೀಗ ಪೊಲೀಸರ ಮತ್ತೊಂದು ತಂಡ ಬಲೆ ಬೀಸಿದೆ. ಒಟ್ಟು 11 ಕಳ್ಳರಿದ್ದ ಟೀಮ್ ಗುಹೆಯಲ್ಲಿ ಚಿನ್ನಾಭರಣದ ನಿಧಿಗಾಗಿ ಶೋಧ ಕಾರ್ಯದಲ್ಲಿ ತೊಡಗಿತ್ತು.
ತಾರಾನಗರದ ನಾರಿಹಳ್ಳದ ಹಿಂಭಾಗದ ದಟ್ಟ ಅರಣ್ಯದಲ್ಲಿ ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಗುಹೆಗೊಳಗೆ ಸುರಂಗ ಕೊರೆಯೋಕೆ ಮುಂದಾಗಿದ್ದ ಖದೀಮರು, ಗುಹೆಯೊಳಗೆ ಸುರಂಗ ಕೊರೆಯಲು ಪ್ರಾರಂಭಿಸಿ, ತಾತ್ಕಾಲಿಕ ಆಕ್ಸಿಜನ್ ವ್ಯವಸ್ಥೆ ಕೂಡ ಮಾಡಿಕೊಂಡಿದ್ದರು. ದೋಣಿಮಲೈ ಬ್ಲಾಕ್ ಅರಣ್ಯ ಪ್ರದೇಶದ ಗುಹೆಯ 40 ಅಡಿ ಆಳಕ್ಕೆ ಇಳಿದಿದ್ದ ಕಳ್ಳರ ಗ್ಯಾಂಗ್, ನೀರು ತರಲು ನಾರಿಹಳ್ಳಕ್ಕೆ ಹೋಗಿದ್ದರು. ಈ ವೇಳೆ ನೀರು ತರಲು ಹೋದಾಗ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ 42 ಸಾವಿರ ಉದ್ಯೋಗಳು ಔಟ್! ಅಂಬಾನಿ ಕಂಪೆನಿಯಲ್ಲಿ ಏನಾಗ್ತಿದೆ? ವಿವರ ಇಲ್ಲಿದೆ..
ಗುಹೆ ಹತ್ತಿರ ಹೋದ ಅರಣ್ಯಾಧಿಕಾರಿಗಳು ಖದೀಮರ ಸುರಂಗ ಕೊರೆಯುವ ಸ್ಥಳ ನೋಡಿ ಅಚ್ಚರಿಗೊಂಡು, ತಕ್ಷಣವೇ ತಮ್ಮ ತಂಡದೊಂದಿಗೆ ಅರೆಸ್ಟ್ ಮಾಡಿದ್ದಾರೆ. ಆದ್ರೆ, 6 ಮಂದಿ ಕಳ್ಳರು ಮಾತ್ರ ಅಧಿಕಾರಿಗಳ ಬಲೆಯಿಂದ ಎಸ್ಕೇಪ್ ಆಗಿದ್ದು, ಇವರ ಬಂಧನಕ್ಕೆ ಇದೀಗ ಹೊಸ ತಂಡವನ್ನೇ ರಚನೆ ಮಾಡಲಾಗಿದೆ. ಕಾಡಿಗೆ ಎಂಟ್ರಿ ಕೊಡಲು ದೊಡ್ಡ ಸಂಚನ್ನೇ ಹೂಡಿದ್ದ ಖದೀಮರ ಗ್ಯಾಂಗ್, ಸ್ಥಳಕ್ಕೆ ಬರುವ ಮುನ್ನವೇ ನಿಧಿ ಶೋಧನೆ ಬಗ್ಗೆ ಬ್ಲೂ ಪ್ರಿಂಟ್ ಕೂಡ ತಯಾರಿಸಿದ್ದರು ಎಂಬುದು ವರದಿಯಿಂದ ತಿಳಿದುಬಂದಿದೆ.