ನ್ಯೂಸ್

ಆಕ್ಸಿಜನ್ ಸಿಲಿಂಡರ್​ ಹೆಸರಲ್ಲಿ ವಂಚನೆ : ಇಬ್ಬರು ವಿದೇಶೀಯರ ಬಂಧನ

ನವದೆಹಲಿ : ಆಕ್ಸಿಜನ್ ಸಿಲಿಂಡರ್​ ಒದಗಿಸುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ಇಬ್ಬರು ಆಫ್ರಿಕಾ ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈರ್ವರು ಬಂಧಿತರು ಭಾರತದ ವಿವಿಧೆಡೆಯ 1000 ಕ್ಕೂ ಹೆಚ್ಚು ಜನರನ್ನು ಈವರೆಗೆ ಬೇರೆಬೇರೆ ರೀತಿಯಲ್ಲಿ ವಂಚಿಸಿ ಸುಮಾರು 2 ಕೋಟಿ ರೂಪಾಯಿ ಲೂಟಿ ಮಾಡಿದ್ದರು ಎಂದು ಬೆಳಕಿಗೆ ಬಂದಿದೆ.

ಮೇ 5 ರಂದು, ದೆಹಲಿ ಪೊಲೀಸರಿಗೆ ದೆಹಲಿ ನಿವಾಸಿಯೊಬ್ಬರು ನೀಡಿದ ದೂರಿನಲ್ಲಿ, 'ಕರೊನಾದಿಂದ ಬಳಲುತ್ತಿದ್ದ ತಮ್ಮ ಸಂಬಂಧಿಕರಿಗಾಗಿ ಆಕ್ಸಿಜನ್ ಸಿಲಿಂಡರ್ ಪಡೆಯಲು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಫೋನ್ ಸಂಖ್ಯೆಗೆ ಕರೆ ಮಾಡಿದೆ. ಆರೋಪಿಗಳು 16,000 ರೂ. ಪಾವತಿಸಲು ಹೇಳಿದ್ದು, ಅದರೊಂದಿಗೆ 4,000 ಸಾರಿಗೆ ಶುಲ್ಕವಾಗಿ ಬೇಡಿಕೆಯಿಟ್ಟರು. ತದನಂತರ ಅವರ ಖಾತೆಗೆ 20,000 ರೂ. ವರ್ಗಾಯಿಸಿದ್ದಾಗಿ ಹೇಳಿದ್ದಾರೆ. ಸಿಲಿಂಡರ್​​ತಮ್ಮ ವಿಳಾಸ ತಲುಪುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ಯಾವುದೇ ಸಿಲಿಂಡರ್ ಬರಲಿಲ್ಲ. ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ತಮ್ಮ ಸಂಖ್ಯೆಯನ್ನು ಬ್ಲಾಕ್​ ಮಾಡಿದರು' ಎಂದು ಹೇಳಿದ್ದರು.

ಈ ಪ್ರಕರಣದ ತನಿಖೆ ನಡೆಸಿದಾಗ, ಇಬ್ಬರು ವಿದೇಶೀ ಪ್ರಜೆಗಳು ದೇಶಾದ್ಯಂತ ಹಬ್ಬಿರುವ ವಂಚನೆಯ ಜಾಲವನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಮೇ 13 ರಂದು ನೈಜೀರಿಯಾದ ಚೀಮ ಬೆನ್ನೆತ್​(42 ವರ್ಷ) ಎಂಬುವನನ್ನು ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್​ನಲ್ಲಿ ಹಿಡಿಯಲಾಯಿತು. ಅವನ ಸಹಚರ ಘಾನದ ನಿವಾಸಿ ಜೊನಥನ್ ಕೋಜೋ(44 ವರ್ಷ) ಎಂಬುವನನ್ನು ಎರಡು ದಿನಗಳ ನಂತರ ಬಂಧಿಸಲಾಯಿತು ಎಂದು ಅಪರಾಧ ವಿಭಾಗ ಎಸಿಪಿ ಶಿಬೇಶ್ ಸಿಂಗ್ ತಿಳಿಸಿದ್ದಾರೆ.

ಬಂಧಿತ ಬೆನ್ನೆತ್​, ಭಾರತ ಮತ್ತು ವಿದೇಶದಲ್ಲಿ ತನ್ನ ಸಹಚರರೊಂದಿಗೆ ಜನರಿಗೆ ವಿವಿಧ ರೀತಿಯಲ್ಲಿ ವಂಚಿಸುವುದನ್ನೇ ಕಸುಬು ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಕರೊನಾ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಕ್ಸಿಜನ್ ಸಿಲಿಂಡರ್​ಗೆ ಬೇಡಿಕೆ ಇರುವುದನ್ನು ಗಮನಿಸಿ, ವಿವಿಧ ದೂರವಾಣಿ ಸಂಖ್ಯೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಜನರಿಗೆ ಸಿಲಿಂಡರ್ ಒದಗಿಸುವುದಾಗಿ ಹೇಳಿ ಹಣ ಪಡೆದು ನಂತರ ನಾಪತ್ತೆಯಾಗುತ್ತಿದ್ದರು ಎನ್ನಲಾಗಿದೆ.

ಬಂಧಿತರಿಂದ 163 ಸಿಮ್ ಕಾರ್ಡ್​ಗಳು, 19 ಮೊಬೈಲ್ ಫೋನ್, ಐದು ಲ್ಯಾಪ್​ಟಾಪ್​, ನಾಲ್ಕು ಡೆಬಿಟ್ ಕಾರ್ಡ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ಸಹಚರನೊಬ್ಬ ಹಣ ಪಡೆಯಲು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದುಕೊಡುತ್ತಿದ್ದ. ಈ ರೀತಿಯಾಗಿ ವಂಚನೆಗಾಗಿಯೇ 20 ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿಕೊಂಡಿದ್ದು, ಸಂಕಷ್ಟದ ಸ್ಥಿತಿಯಲ್ಲಿರುವ ಅಮಾಯಕರಿಂದ ಹಣ ಪಡೆದಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ದುಷ್ಕೃತ್ಯಗಳಲ್ಲಿ ತೊಡಗಿದ್ದ ಇತರರ ಪತ್ತೆ ಕಾರ್ಯ ಮುಂದುವರಿದಿದೆ. (ಏಜೆನ್ಸೀಸ್)