ಜೈಪುರ: ಜೂನ್ 04ರಂದು ಪ್ರಕಟಗೊಂಡ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಬಹುಮತ ಪಡೆದು ಸರ್ಕಾರ ರಚಿಸಿದ್ದಾರಾದರೂ ನಿರೀಕ್ಷಿತ ಸ್ಥಾನಗಳಲ್ಲಿ ಗೆಲ್ಲುವಲ್ಲಿ ವಿಫಲವಾಗಿದೆ. ಪಕ್ಷದ ಸೋಲಿನ ಕುರಿತು ಮಾತನಾಡಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಎನ್ಡಿಎ ಮೈತ್ರಿಕೂಟವು ಕಡಿಮೆ ಸ್ಥಾನಗಳನ್ನು ಗಳಿಸಲು ವಿದೇಶಿ ಹಸ್ತಕ್ಷೇಪವೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೈಪುರದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚೌಹಾಣ್ ವಿಪಕ್ಷಗಳಲ್ಲಿ ಕಾಣದ ಕೆಲವು ವಿದೇಶಿ ಕೈಗಳ ಸಕ್ರಿಯವಾಗಿವೆ. ಅವುಗಳು ಬಿಜೆಪಿಯನ್ನು ಸೋಲಿಸಲು ಶ್ರಮಿಸುತ್ತಿರುತ್ತವೆ. 2024ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಕಡಿಮೆ ಸ್ಥಾನಗಳಲ್ಲಿ ಗೆಲ್ಲಲು ಇದು ಕೂಡ ಮುಖ್ಯ ಕಾರಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ ತನ್ನ ಸ್ನೇಹಿತೆಯೊಂದಿಗೆ ಚಾಟ್ ಮಾಡಿದ್ದಕ್ಕೆ ಗೆಳೆಯನನ್ನೇ ಕೊಂದ ಅಪ್ರಾಪ್ತ ವಯಸ್ಕ
ರಾಜಸ್ಥಾನ ಚುನಾವಣಾ ಉಸ್ತುವಾರಿ ವಿನಯ್ ಸಹಸ್ರಬುದ್ಧೆ ಚೌಹಾಣ್ ಮಾತನಾಡಿ, ರಾಜಸ್ಥಾನದ 25 ಸ್ಥಾನಗಳ ಪೈಕಿ ನಾವು 11ರಲ್ಲಿ ಸೋತಿದ್ದೇವೆ. ರಾಷ್ಟ್ರವ್ಯಾಪಿ 65 ಸ್ಥಾನಗಳಲ್ಲಿ ಸೋಲು ಕಂಡಿದ್ದೇವೆ. ಪಕ್ಷವು ಈ ವಿಚಾರವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದು, ಲೋಪದೋಷಗಳ ಕುರಿತು ಚರ್ಚೆಯಾಗಬೇಕಿದೆ. ಇದು ಯಾರನ್ನು ದೂಷಿಸುವ ಸಮಯವಲ್ಲ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಮಾತನಾಡಿ, ಪಕ್ಷವು ಎಲ್ಲಾ ಕಾರ್ಯಕರ್ತರ ಚಲನಚಲನದ ಮೇಲೆ ಗಮನ ಇಟ್ಟಿರುತ್ತದೆ ಎಂಬುದಕ್ಕೆ ನಾನೇ ಜೀವಂತ ಸಾಕ್ಷಿ. ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಇಂದು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಪಕ್ಷವು ಎಲ್ಲರ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸೂಕ್ತ ಸಮಯದಲ್ಲಿ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಹೇಳಿದ್ದಾರೆ.