ನ್ಯೂಸ್

ಬೆಳ್ಳಂಬೆಳಗ್ಗೆ ಕಚೇರಿಯಲ್ಲೇ ಉದ್ಯಮಿ ಮೇಲೆ ಗುಂಡಿನ ದಾಳಿ

ಬೆಂಗಳೂರು: ಇಂದು (ಭಾನುವಾರ) ಬೆಳ್ಳಂಬೆಳಗ್ಗೆ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಅಪರಿಚಿತರ ಗುಂಪು ಗುಂಡಿನ ದಾಳಿ ನಡೆಸಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಬಾಬು ಅಲಿಯಾಸ್​ ಆಟೋ ಡ್ರೈವರ್ ಬಾಬು ದಾಳಿಗೆ ಒಳಗಾದವರು. ಕೆಆರ್ ಪುರಂ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬಾಬು ಕಚೇರಿ ಹೊಂದಿದ್ದು, ಆ ಕಚೇರಿಗೆ ನುಗ್ಗಿದ ಐವರು ಅಪರಿಚಿತರ ತಂಡ ಏಕಾಏಕಿ ಗುಂಡು ಹಾರಿಸಿದೆ. ಬಳಿಕ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಹಲ್ಲೆಗೊಳಗಾದ ಬಾಬು, ಸಚಿವ ಬೈರತಿ ಬಸವರಾಜ್ ಅವರ ಆಪ್ತ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಉದ್ಯಮಿ ಬಾಬು ಅವರನ್ನು ಕೆ.ಆರ್. ಪುರಂನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ಘಟನೆಗೆ ಸಂಬಂಧ ಕೆಲವರನ್ನು ವಶಕ್ಕೆ ಪಡೆದಿರುವ ಕೆ.ಆರ್​. ಪುರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.