ನ್ಯೂಸ್

ಪುನೀತ್ ಫುಡ್ ಫೆಸ್ಟಿವಲ್ ನಡೆಯುತ್ತಿದ್ದ ಎಂಪೈರ್ ಹೋಟೆಲ್​ನಲ್ಲಿ ಅಗ್ನಿ ಅವಘಡ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಂಪೈರ್ ಹೋಟೆಲ್​ನಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ. ನಗರದ ಚರ್ಚ್​ ಸ್ಟ್ರೀಟ್​ನಲ್ಲಿರುವ ಈ ಹೋಟೆಲ್​ನ ಲಾಡ್ಜ್​ ರೂಮ್​ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮಧ್ಯಾಹ್ನ 1.30ರ ಸುಮಾರಿಗೆ ಈ ಪ್ರಕರಣ ಸಂಭವಿಸಿದೆ.

ಎಂಪೈರ್ ಹೋಟೆಲ್​ನ ಲಾಡ್ಜ್​ ಕೋಣೆಯ ಗಾಜು ಒಡೆದುಹೋಗಿ ಹೊಗೆ ಹೊರಗೆ ಕಾಣಿಸಿಕೊಂಡಾಗ ಬೆಂಕಿ ಹೊತ್ತಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಇದೇ ಹೋಟೆಲ್​ನಲ್ಲಿ ಪುನೀತ್ ಫುಡ್​ ಫೆಸ್ಟಿವಲ್ ಕೂಡ ನಡೆಯುತ್ತಿದ್ದು, ಅದಕ್ಕೆ ಬಂದಿದ್ದ ಗ್ರಾಹಕರೂ ಇದ್ದರು.

ಒಟ್ಟು 32 ರೂಮ್​ಗಳನ್ನು ಹೊಂದಿರುವ ಎಂಪೈರ್ ಹೋಟೆಲ್​ನಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ 20 ರೂಮ್​ಗಳಲ್ಲಿ ಅತಿಥಿಗಳಿದ್ದು, 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ರೂಮ್​ ನಂ. 205ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಲ್ಲರನ್ನೂ ಹೊರಗೆ ಕಳುಹಿಸಲಾಗಿದೆ.

ರೂಮ್​ನಲ್ಲಿದ್ದ ಟಿವಿ ಬ್ಲಾಸ್ಟ್​ ಆಗಿ ಬೆಂಕಿ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿರುವ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸದ್ಯಕ್ಕೆ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.