ನ್ಯೂಸ್

ರಸಗೊಬ್ಬರ ಘಟಕದಲ್ಲಿ ಅಗ್ನಿ ಅವಘಡ; ಇಬ್ಬರು ಕಾರ್ಮಿಕರು ಸಜೀವ ದಹನ, ಮತ್ತಿಬ್ಬರಿಗೆ ಗಾಯ| fire

fire: ಗುಜರಾತ್​ನ ಮೆಹ್ಸಾನ್​ ಜಿಲ್ಲೆಯ ರಸಗೊಬ್ಬರ ಘಟಕದಲ್ಲಿ ಭಾನುವಾರ(ಸೆ. 14) ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಸಜೀವ ದಹನವಾಗಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮೆಹ್ಸಾನ್ ಗ್ರಾಮೀಣ ಠಾಣೆ ಅಧಿಕಾರಿ,  ಸಮೇತ್ರ ಗ್ರಾಮದ ಬಳಿ ಇರುವ ರಸಗೊಬ್ಬರ ಘಟಕದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಅವಘಡ ನಡೆದಿದೆ. ರಾತ್ರಿ ಪಾಳಿಯಲ್ಲಿ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮೃತರನ್ನು ಬಿಹಾರದ ಮನೀಶ್, ಮಹಾರಾಷ್ಟ್ರದ ಫುಲ್ಚಂದ್ ಎಂದು ಗುರುತಿಸಲಾಗಿದೆ. ಘಟಕದಲ್ಲಿ ಒಟ್ಟು 6 ಕಾರ್ಮಿಕರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತಿದ್ದರು ಎಂದು ಹೇಳಿದ್ದಾರೆ.

ನಂತರ ಮೃತರಾದ ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಬಗ್ಗೆ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)