ಬೆಂಗಳೂರು: ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಬಿಡುಗಡೆಯಾಗಿ ಉತ್ತಮ ಓಪನಿಂಗ್ ಪಡೆದುಕೊಂಡಿತ್ತು. ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ, ಇದೀಗ 50 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿದೆ. ಈಗಲೂ ಕೆಲವು ಬಿ-ಸಿ ಸೆಂಟರ್‌ಗಳಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದಾಗಿ ಖುಷಿ ವ್ಯಕ್ತಪಡಿಸುತ್ತಾರೆ ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ.
ರೈತರೇ ನಿಜವಾದ 'ಫೈಟರ್' ಎಂಬ ಸಂದೇಶ ಹೊತ್ತು ಬಂದಿದ್ದ ಈ ಸಿನಿಮಾಗೆ ನೂತನ್ ಉಮೇಶ ಆಕ್ಷನ್ ಕಟ್ ಹೇಳಿದ್ದರು. ವಿನೋದ್ ಜೋಡಿಯಾಗಿ ಪಾವನಾ ಹಾಗೂ ಲೇಖಾಚಂದ್ರ ಕಾಣಿಸಿಕೊಂಡಿದ್ದರು. ಬಹಳ ವರ್ಷಗಳ ಬಳಿಕ ನಟಿ ನಿರೋಷ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದು ವಿಶೇಷ. ಇನ್ನು ಚಿತ್ರದಲ್ಲಿದ್ದ ಸಂದೇಶವನ್ನು ಮೆಚ್ಚಿದ ಅನೇಕ ಕನ್ನಡಪರ ಸಂಘಟನೆಗಳು, ರೈತಸಂಘಗಳು ಖುದ್ದಾಗಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಹಾರೈಸಿದ್ದು ಮತ್ತೊಂದು ವಿಶೇಷ.
ಇದೀಗ ಫೈಟರ್ ಐವತ್ತನೇ ದಿನದ ಪ್ರದರ್ಶನ ಪೂರೈಸಿರುವ ಖುಷಿಯಲ್ಲಿದೆ ಚಿತ್ರತಂಡ. ಇದೇ ಸಂಭ್ರಮದಲ್ಲಿ ಸದ್ಯದಲ್ಲೇ ಬಿಗ್ ಸ್ಟಾರ್ ಸಿನಿಮಾವೊಂದನ್ನು ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ ನಿರ್ಮಾಪಕ ಸೋಮಶೇಖರ್.
"ಈಗಾಗಲೇ ಎರಡು ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಫೈಟರ್‌ನಿಂದ ಸಾಕಷ್ಟು ಹೆಸರು ಬಂದಿದೆ, ಹಣವೂ ಬಂದಿದೆ. ನನ್ನ ಮುಂದಿನ ಯೋಜನೆಗಳು ಇನ್ನೂ ದೊಡ್ಡ ಮಟ್ಟದಲ್ಲಿರಲಿವೆ. ಸದ್ಯದಲ್ಲೇ ಹೊಸ ಸಿನಿಮಾವೊಂದನ್ನು ಅನೌನ್ಸ್ ಮಾಡಲಿದ್ದೇನೆ. ಅದರಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರೇ ಇರಲಿದ್ದಾರೆ. ಸ್ಕ್ರಿಪ್ಟ್ ವರ್ಕ್ ಕೊನೆಯ ಹಂತದಲ್ಲಿದೆ. ಅದು ಮುಗಿದ ಕೂಡಲೇ ಹೊಸ ಸಿನಿಮಾ ಅನೌನ್ಸ್ ಮಾಡುತ್ತೇನೆ" ಎಂದು ಸೋಮಶೇಖರ್ ತಿಳಿಸಿದ್ದಾರೆ.