ನ್ಯೂಸ್

Ferrari Car: ಕಳುವಾದ 5 ಕೋಟಿ ಮೌಲ್ಯದ ಫೆರಾರಿ ಕಾರನ್ನು ಹುಡುಕಿಕೊಟ್ಟ ಏರ್​ಪಾಡ್ಸ್​!

ವಾಷಿಂಗ್ಟನ್​​: ಕಳುವಾಗಿದ್ದ 5 ಕೋಟಿ ಮೌಲ್ಯದ ಫೆರಾರಿ ಕಾರು ( Ferrari Car ) ಅಮೆರಿಕದ ಕನೆಕ್ಟಿಕಟ್‌ ರಾಜ್ಯದ ವಾಟರ್‌ಬರಿ ನಗರದಲ್ಲಿ ಇತ್ತೀಚೆಗಷ್ಟೇ ಪತ್ತೆಯಾಗಿದೆ. ಕಾರಿನ ಮಾಲೀಕರ ಏರ್‌ಪಾಡ್ಸ್​ ಸಹಾಯದಿಂದ ಕಾರನ್ನು ಸುಲಭವಾಗಿ ಪತ್ತೆಹಚ್ಚಲಾಯಿತು.

ಫೆರಾರಿ ಕಾರನ್ನು ಸೆಪ್ಟೆಂಬರ್ 16ರಂದು ಗ್ರೀನ್‌ವಿಚ್‌ ನಗರದಲ್ಲಿ ಕಳವು ಮಾಡಲಾಯಿತು. ಕಾರಿನ ಮಾಲಿಕ ಏರ್‌ಪಾಡ್‌ಗಳನ್ನು ಕಾರಿನಲ್ಲಿ ಬಿಟ್ಟಿದ್ದರಿಂದ. ಹೊಸ ಟೆಕ್ನಾಲಜಿ ಮೂಲಕ ಕಾರನ್ನು ಸುಲಭವಾಗಿ ಪತ್ತೆಹಚ್ಚಲಾಯಿತು. ಲೊಕೇಶನ್ ನೋಡಿದಾಗ ಅದು ವಾಟರ್​ಬರಿಯ ದಕ್ಷಿಣ ಮುಖ್ಯ ರಸ್ತೆಯಲ್ಲಿರುವ ಗ್ಯಾಸ್ ಸ್ಟೇಷನ್​ ತೋರಿಸಿತು. ಬಳಿಕ ಅಲ್ಲಿಗೆ ವಾಟರ್‌ಬರಿ ಆಟೋ ಥೆಫ್ಟ್ ಟಾಸ್ಕ್ ಫೋರ್ಸ್‌ನ ಅಧಿಕಾರಿಗಳು ಹೋದಾಗ 22 ವರ್ಷದ ಡ್ರೈವರ್​ ಡಿಯೋನ್ ಸ್ಕೋಂಟೆನ್ ಪತ್ತೆಯಾದನು. ಆತ ಅಧಿಕಾರಿಗಳನ್ನು ನೋಡುತ್ತಿದ್ದಂತೆ ಅಲ್ಲಿಂದ ಪರಾರಿಯಾದನು.

ಮತ್ತೆ ಏರ್‌ಪಾಡ್‌ಗಳನ್ನು ಟ್ರ್ಯಾಕ್ ಮಾಡಿದಾಗ ಕಾರಿನ ಸಮೇತ ಡಿಯೋನ್ ಸ್ಕೋಂಟೆನ್ ಸಿಕ್ಕಿಬಿದ್ದನು. ಆತನೊಂದಿಗೆ ಇದ್ದ 19 ವರ್ಷದ ಕಿಯೋನ್ ವೆಬ್‌ಸ್ಟರ್ ಕೂಡ ಬಂಧಿಯಾಗಿದ್ದಾನೆ. ಇದೀಗ ಆರೋಪಿ ಸ್ಕೋಂಟೆನ್ ಹಾಗೂ ಸಹಚರ ವೆಬ್​ಸ್ಟರ್​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ವಿಚಾರಣೆ ಬಳಿಕ ಇಬ್ಬರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಈ ಪ್ರಕರಣದ ಬಗ್ಗೆ ವಾಟರ್‌ಬರಿ ಪೊಲೀಸ್ ಮುಖ್ಯಸ್ಥ ಫರ್ನಾಂಡೊ ಸ್ಪಾಗ್ನೊಲೊ ಮಾತನಾಡಿ, ಸ್ಕೋಂಟೆನ್ ಸಹಚರ 19 ವರ್ಷದ ವೆಬ್‌ಸ್ಟರ್ ಈ ಹಿಂದೆಯೂ ಸಾಕಷ್ಟು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಕಳ್ಳತನ ಮತ್ತು ಹಿಂಸೆ ಸೇರಿದಂತೆ ಏಳು ಸಕ್ರಿಯ ಆರೋಪಗಳು ಆತನ ಮೇಲಿವೆ ಎಂದಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ ಬಳಿಕ ನಿರಾಳರಾಗಿದ್ದೇವೆ ಎಂದು ಆ ಪ್ರದೇಶದ ಜನರು ತಿಳಿಸಿದ್ದಾರೆ. (ಏಜೆನ್ಸೀಸ್​)