ನ್ಯೂಸ್

ಆಸ್ಪತ್ರೆಗೆ ದಾಖಲಾಗಿದ್ದ ಡೆಂಗ್ಯೂ ರೋಗಿಗೆ ಲೈಂಗಿಕ ಕಿರುಕುಳ ನೀಡಿದ ಕಾಂಪೌಂಡರ್; ಆರೋಪಿ ಅರೆಸ್ಟ್

ಲಖನೌ: ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ರೋಗಿಗೆ ಖಾಸಗಿ ಆಸ್ಪತ್ರೆಯ ಕಾಂಪೌಂಡರ್​ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರಪ್ರದೇಶದ ಮುಜಾಫರ್​ನಗರ ಜಿಲ್ಲೆಯಲ್ಲಿ ನಡೆದಿದೆ.

ಕಿರುಕುಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆ ಸಂಬಂಧ ಯುವತಿ ಕುಟುಂಬಸ್ಥರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಶೋಯೆಬ್​​ ಎಂದು ಗುರುತಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬಂಧಿತ ಆರೋಪಿ ರಾತ್ರಿ ವೇಳೆ ರೋಗಿಗಳು ಮಲಗಿರುವ ವೇಳೆ ಕೃತ್ಯ ಎಸಗುತ್ತಿದ್ದುದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನ ವಿರುದ್ಧ ಚಾರ್ಜ್​ಶೀಟ್​ ಸಿದ್ದಪಡಿಸಿ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಮಾಲೀಕ, ಆರೋಪಿ ಶೋಯೆಬ್​ನನ್ನು ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ. ಮೊದಲಿಗೆ ಯುವತಿಯ ಕುಟುಂಬಸ್ಥರು ದೌರ್ಜನ್ಯ ಎಸಗಿರುವ ಬಗ್ಗೆ ಆಡಳಿತ ಮಂಡಳಿಗೆ ತಿಳಿಸಿದ್ದರು. ಕೂಡಲೇ ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆತ ಕೃತ್ಯ ಎಸಗಿರುವುದು ಕಂಡು ಬಂದಿತ್ತು. ಕೂಡಲೇ ಆತನನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಪೊಲೀಸ್​ ಅಧಿಕಾರಿಗಳು ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಸ್ಪತ್ರೆಯ ಮಾಲೀಕ ಆಗ್ರಹಿಸಿದ್ದಾರೆ.